ನವದೆಹಲಿ[ಜು.20]: ತುಂಡು ಭೂಮಿ ವಿಚಾರಕ್ಕೆ ಬುಧವಾರ ಗುಂಡಿನ ದಾಳಿ ನಡೆದು, 10 ಮಂದಿ ಸಾವನ್ನಪ್ಪಿದ ಉತ್ತರಪ್ರದೇಶದ ಸೋನ್‌ಭದ್ರಕ್ಕೆ ಭೇಟಿ ನೀಡಲು ಶುಕ್ರವಾರ ಪ್ರಯತ್ನಿಸಿದ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪೊಲೀಸರು ತಡೆಯೊಡ್ಡಿದ ಘಟನೆ ನಡೆದಿದೆ. ಇದಾದ ನಂತರ ಹೈಡ್ರಾಮಾವೇ ನಡೆದಿದ್ದು, ನಡುರಸ್ತೆಯಲ್ಲೇ ಬೆಂಬಲಿಗರ ಜತೆ ಪ್ರಿಯಾಂಕಾ ಕುಳಿತು, ಭೇಟಿ ನೀಡಿಯೇ ತೀರುವುದಾಗಿ ಪಟ್ಟುಹಿಡಿದಿದ್ದಾರೆ. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದು, ಸ್ಥಳಾಂತರ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ಅಕ್ರಮ ಬಂಧನ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜರಿದಿದ್ದಾರೆ. ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್‌ ಕರೆ ನೀಡಿದೆ.

ಸೋನ್‌ಭದ್ರದ ಗ್ರಾಮ ಪಂಚಾಯಿತಿ ಮುಖ್ಯಸ್ಥ ಯಜ್ಞ ದತ್ತಾ ಹಾಗೂ ಗೊಂಡಾ ಬುಡಕಟ್ಟು ಜನರ ನಡುವೆ ತುಂಡು ಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಘೋರಾವಲ್‌ ಎಂಬಲ್ಲಿ ಬುಧವಾರ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ದತ್ತಾ ಬೆಂಬಲಿಗರು ಗುಂಡಿನ ದಾಳಿ ನಡೆಸಿದ್ದರಿಂದ ಗೊಂಡಾ ಬುಡಕಟ್ಟು ಸಮುದಾಯದ 10 ಮಂದಿ ಸಾವಿಗೀಡಾಗಿ, 18 ಮಂದಿ ಗಂಭೀರ ಗಾಯಗೊಂಡಿದ್ದರು.

ಅವರನ್ನು ಭೇಟಿ ಮಾಡುವ ಸಲುವಾಗಿ ಶುಕ್ರವಾರ ವಾರಾಣಸಿಗೆ ಆಗಮಿಸಿದ ಪ್ರಿಯಾಂಕಾ, ಮೊದಲು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಅಲ್ಲಿಂದ 80 ಕಿ.ಮೀ. ದೂರದ ಸೋನ್‌ಭದ್ರಕ್ಕೆ ತೆರಳಲು ಮುಂದಾದರು. ಅವರನ್ನು ವಾರಾಣಸಿ- ಮಿರ್ಜಾಪುರ ರಸ್ತೆಯಲ್ಲಿ ಪೊಲೀಸರು ತಡೆದರು. ಈ ಕೂಡಲೇ ಭೇಟಿಗೆ ಅವಕಾಶ ನೀಡಬೇಕು ಎಂದು ನಡುರಸ್ತೆಯಲ್ಲೇ ಪ್ರಿಯಾಂಕಾ ಅವರು ಬೆಂಬಲಿಗರ ಜತೆ ಧರಣಿ ಕುಳಿತರು. ಪೊಲೀಸರ ಮನವೊಲಿಕೆಗೂ ಬಗ್ಗಲಿಲ್ಲ. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ಸಮೀಪದ ಚೂನಾರ್‌ ಅತಿಥಿ ಗೃಹಕ್ಕೆ ಕರೆದೊಯ್ದರು. ಇದು ಕಾಂಗ್ರೆಸ್ಸಿನ ಆಕ್ರೋಶಕ್ಕೆ ಕಾರಣವಾಯಿತು. ಇದು ಅಕ್ರಮ ಬಂಧನ. ಮನಸೋ ಇಚ್ಛೆ ಉತ್ತರಪ್ರದೇಶ ಸರ್ಕಾರ ಅಧಿಕಾರ ಪ್ರಯೋಗಿಸುತ್ತಿರುವುದನ್ನು ನೋಡಿದರೆ ಅದಕ್ಕೆ ಇರುವ ಅಭದ್ರತೆ ಗೋಚರವಾಗುತ್ತದೆ ಎಂದು ರಾಹುಲ್‌ ದೆಹಲಿಯಲ್ಲಿ ಕಿಡಿಕಾರಿದರು. ಇತರೆ ನಾಯಕರೂ ದನಿಗೂಡಿಸಿದರು.