ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಜು.23]:  ಐಎಂಎ ಸಂಸ್ಥೆ ಮಾಲೀಕ ಮಹಮ್ಮದ್‌ ಮನ್ಸೂರ್‌ ಖಾನ್‌ನಿಂದ ಲಾಭ ಪಡೆದ ‘ಫಲಾನುಭವಿಗಳ’ ಪಟ್ಟಿಯನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಮನ್ಸೂರ್‌ನ ಬಲಗೈ ಬಂಟ ಹಾಗೂ ಆ ಸಂಸ್ಥೆ ನಿರ್ದೇಶಕ ನಿಜಾಮುದ್ದೀನ್‌ ಅರುಹಿದ್ದಾನೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.

ಈಗ ಇ.ಡಿ. ವಶದಲ್ಲಿರುವ ಮನ್ಸೂರ್‌ನನ್ನು ವಶಕ್ಕೆ ಪಡೆದು, ಬಳಿಕ ನಿಜಾಮುದ್ದೀನ್‌ ನೀಡಿರುವ ಫಲಾನುಭವಿಗಳ ಪಟ್ಟಿಮುಂದಿಟ್ಟು ಮತ್ತಷ್ಟುಮಾಹಿತಿ ಕೆದಕಲು ಎಸ್‌ಐಟಿ ಸಜ್ಜಾಗಿದೆ.

ಆನ್‌ಲೈನ್‌ ಟ್ರೇಡಿಂಗ್‌ ಕ್ಷೇತ್ರದಲ್ಲಿ ನಿಪುಣನಾಗಿದ್ದ ನಿಜಾಮುದ್ದೀನ್‌, ಮನ್ಸೂರ್‌ನ ಬಹುತೇಕ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ. ಅಲ್ಲದೆ ಮನ್ಸೂರ್‌ ಮತ್ತು ಆತನ ಸ್ನೇಹ ವಲಯದಲ್ಲಿದ್ದ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಮಧ್ಯೆ ಸೇತುವೆಯಾಗಿ ಆತ ಕೆಲಸ ಮಾಡಿದ್ದು, ನಿಜಾಮುದ್ದೀನ್‌ ಮೂಲಕವೇ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಇದುವರೆಗೆ ತನಿಖೆಯಲ್ಲಿ ಮನ್ಸೂರ್‌ನೇ ನಿರ್ವಹಿಸಿರುವ ಡೈರಿ ಪತ್ತೆಯಾಗಿಲ್ಲ. ಆದರೆ, ನಿರ್ದೇಶಕರಿಂದ ಮಹತ್ವದ ದಾಖಲೆಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.

ಈ ಬಹುಕೋಟಿ ವಂಚನೆ ಕೃತ್ಯ ಬೆಳಕಿಗೆ ಬಂದ ಬಳಿಕ ತಲೆಮರೆಸಿಕೊಂಡಿದ್ದ ನಿಜಾಮುದ್ದೀನ್‌, ಮೂರು ದಿನಗಳ ನಂತರ ಪೊಲೀಸರ ಬಲೆಗೆ ಬಿದ್ದಿದ್ದ. ಆತನನ್ನು ವಶಕ್ಕೆ ಪಡೆದ ಎಸ್‌ಐಟಿ ತೀವ್ರ ವಿಚಾರಣೆಗೊಳಪಡಿಸಿತು. ನಿಜಾಮುದ್ದೀನ್‌ ಹೇಳಿಕೆ ಆಧರಿಸಿಯೇ ಬಿಬಿಎಂಪಿಯ ನಾಮ ನಿರ್ದೇಶಿತ ಸದಸ್ಯ ಮುಜಾಹಿದ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌, ಗ್ರಾಮ ಲೆಕ್ಕಿಗ ಮಂಜುನಾಥ್‌ ಹಾಗೂ ಬಿಡಿಎ ಕಾರ್ಯನಿವಾಹಕ ಎಂಜಿನಿಯರ್‌ ಕುಮಾರ್‌ ಬಂಧನವಾಯಿತು. ಮಾಜಿ ಸಚಿವ ರೋಷನ್‌ ಬೇಗ್‌ ಸಹ ತನಿಖಾ ವ್ಯಾಪ್ತಿಗೆ ಬಂದಿದ್ದು, ಮತ್ತೊಬ್ಬರು ಐಎಎಸ್‌ ಅಧಿಕಾರಿ ಸೇರಿದಂತೆ ಇನ್ನೂ ಕೆಲವು ಸರ್ಕಾರಿ ಸೇವಕರಿಗೆ ಬಂಧನ ಭೀತಿ ಎದುರಾಗಿದೆ ಎಂದು ತಿಳಿದು ಬಂದಿದೆ.

ಆನ್‌ಲೈನ್‌ ವ್ಯವಹಾರ ಚತುರ:

ಆನ್‌ಲೈನ್‌ ವ್ಯವಹಾರದಲ್ಲಿ ನಿಪುಣನಾಗಿದ್ದ ನಿಜಾಮುದ್ದೀನ್‌, 2016ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಂದು ಆನ್‌ಲೈನ್‌ ಟ್ರೇಡಿಂಗ್‌ ಸಂಬಂಧ ಆ ಕಂಪನಿ ಜತೆ ವ್ಯವಹಾರಕ್ಕೆ ತೆರಳಿದ್ದಾಗ ಮನ್ಸೂರ್‌ ಕಣ್ಣಿಗೆ ನಿಜಾಮುದ್ದೀನ್‌ ಬಿದ್ದಿದ್ದ. ನಂತರ ಅವರಲ್ಲಿ ಆತ್ಮೀಯತೆ ಬೆಳೆಯಿತು. ಕೊನೆಗೆ ಆತನ ವ್ಯವಹಾರಿಕ ಚಾಣಾಕ್ಷತೆಗೆ ವಿಶ್ವಾಸಗೊಂಡ ಮನ್ಸೂರ್‌, ತನ್ನ ಐಎಂಎ ಸಂಸ್ಥೆಯ ನಿರ್ದೇಶಕನ್ನಾಗಿ ನೇಮಿಸಿದ್ದ. ಕ್ರಮೇಣ ಆ ಸಂಸ್ಥೆಯ ಏಳು ನಿರ್ದೇಶಕರ ಪೈಕಿ ನಿಜಾಮುದ್ದೀನ್‌ ಮನ್ಸೂರ್‌ನ ಬಲಗೈ ಭಂಟನಾಗಿ ಪ್ರವರ್ಧಮಾನಕ್ಕೆ ಬಂದಿದ್ದ. ಈ ನಂಬಿಕೆಯಿಂದಲೇ ಮನ್ಸೂರ್‌, ತನ್ನ ಎಲ್ಲಾ ಹಣಕಾಸು ವ್ಯವಹಾರಗಳ ಮೇಲುಸ್ತುವಾರಿಯಾಗಿ ಆತನಿಗೆ ನೀಡಿದ್ದ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಕೆಲ ತಿಂಗಳ ಹಿಂದೆ ಐಎಂಎ ಆರ್ಥಿಕ ವ್ಯವಹಾರಗಳ ಬಗ್ಗೆ ಶಂಕಿಸಿ ತನಿಖೆಗೆ ಆರ್‌ಬಿಐ ಸೂಚಿಸಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಮನ್ಸೂರ್‌ ಬೆನ್ನಿಗೆ ನಿಂತ ನಿಜಾಮುದ್ದೀನ್‌, ಸಂಸ್ಥೆ ಪರವಾಗಿ ಸರ್ಕಾರಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ವರದಿ ಸಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ. ಈ ಅಧಿಕಾರಿಗಳ ನಂಬಿಕಸ್ಥ ಗ್ರಾಮ ಲೆಕ್ಕಿಗ ಮಂಜುನಾಥ್‌ ಸ್ನೇಹ ಸಂಪಾದಿಸಿದ ನಿಜಾಮುದ್ದೀನ್‌, ಆತನನ್ನು ಮುಂದಿಟ್ಟು ಡೀಲ್‌ ಕುದುರಿಸಿದ್ದ. ಇದಕ್ಕೆ ಗ್ರಾಮ ಲೆಕ್ಕಗನಿಗೂ 10 ಲಕ್ಷ ರು. ಕೊಟ್ಟಿದ್ದ ಎನ್ನಲಾಗಿದೆ.

ಮನ್ಸೂರ್‌ ಪರವಾಗಿ ಆ ಸಂಸ್ಥೆ ನಿರ್ದೇಶಕ ನಿಜಾಮುದ್ದೀನ್‌, ಏಪ್ರಿಲ್‌ನಲ್ಲಿ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್‌ ಅವರನ್ನು ಭೇಟಿಯಾಗಿ ನಮ್ಮ ಪರವಾಗಿ ವರದಿ ನೀಡಲು ಸಹಕರಿಸುವಂತೆ ಕೋರಿದ್ದ. ಮೊದಲು 2 ಕೋಟಿ ರು.ಗೆ ಬೇಡಿಕೆ ಇಟ್ಟಜಿಲ್ಲಾಧಿಕಾರಿ, ಕೊನೆಗೆ 1.5 ಕೋಟಿ ರು.ಗೆ ಒಪ್ಪಿದ್ದರು. ಅನಂತರ ಜಿಲ್ಲಾಧಿಕಾರಿ ವಿಜಯಶಂಕರ್‌ ಸೂಚನೆ ಮೇರೆಗೆ ನಿಜಾಮುದ್ದೀನ್‌, ಜೆ.ಸಿ.ರಸ್ತೆಯ ಜೈನ್‌ ಕಾಲೇಜು ಹತ್ತಿರದ ರಿಯಲ್‌ ಎಸ್ಟೇಟ್‌ ಉದ್ಯಮಿ ಕೃಷ್ಣಮೂರ್ತಿ ಕಚೇರಿಗೆ ತೆರಳಿ ಒಂದೇ ಹಂತದಲ್ಲಿ ಲಂಚ ಹಣ ತಲುಪಿಸಿದ್ದ ಎಂದು ಮೂಲಗಳು ಹೇಳಿವೆ.

ಇದಕ್ಕೂ ಮುನ್ನ ಮನ್ಸೂರ್‌ ವಿರುದ್ಧ ತನಿಖೆಗೆ ಕೆಪಿಐಡಿ ಕಾಯ್ದೆ ಅನ್ವಯ ಉಪ ವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಅವರನ್ನು ಸಮಕ್ಷಮ ಪ್ರಾಧಿಕಾರದ ಅಧಿಕಾರಿಯಾಗಿ ಸರ್ಕಾರ ನೇಮಿಸಿತ್ತು. ಉಪ ವಿಭಾಗಾಧಿಕಾರಿ ಅವರನ್ನು ತನ್ನ ಬಲೆಗೆ ಬೀಳಿಸಿಕೊಂಡ ನಿಜಾಮುದ್ದೀನ್‌, ಮಾಚ್‌ರ್‍ನಲ್ಲಿ ಎಸಿಗೆ ಮೂರು ಹಂತದಲ್ಲಿ 4.5 ಕೋಟಿ ರು.ಗೆ ನೀಡಿದ್ದ. ಈ ವ್ಯವಹಾರ ಮುಗಿದ ನಂತರವೇ ಮಾರ್ಚ್ ಲ್ಲಿ ಮನ್ಸೂರ್‌ ಪರವಾಗಿ ಸರ್ಕಾರಕ್ಕೆ ಉಪ ವಿಭಾಗಾಧಿಕಾರಿಗಳು ವರದಿ ಸಲ್ಲಿಸಿದ್ದರು ಎಂದು ಎಸ್‌ಐಟಿ ಉನ್ನತ ಮೂಲಗಳು ಹೇಳಿವೆ.