ನೇರ ಖಾಸಗಿ ಆಸ್ಪತ್ರೆಗೆ ಹೋದರೆ ಆರೋಗ್ಯ ಭಾಗ್ಯವಿಲ್ಲ..

First Published 16, Jan 2018, 10:50 AM IST
Arogya Bhagya Scheme Start Soon
Highlights

ರಾಜ್ಯಾದ್ಯಂತ ತೀವ್ರ ನಿರೀಕ್ಷೆ ಹುಟ್ಟಿಸಿರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ವೈದ್ಯಕೀಯ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ.

ಬೆಂಗಳೂರು (ಜ.16): ರಾಜ್ಯಾದ್ಯಂತ ತೀವ್ರ ನಿರೀಕ್ಷೆ ಹುಟ್ಟಿಸಿರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ವೈದ್ಯಕೀಯ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಆರೋಗ್ಯ ಭಾಗ್ಯ’ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ.

ನವೆಂಬರ್ 1 ರಿಂದಲೇ ಚಾಲನೆಗೊಳ್ಳಬೇಕಾಗಿದ್ದ ಯೋಜನೆಗೆ ಎರಡೂವರೆ ತಿಂಗಳ ಬಳಿಕ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಕೆಪಿಎಂಇ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರು ಅಂಗೀಕಾರ ಸೂಚಿಸಿದ್ದು, ನಿಯಮಾವಳಿ ರಚನೆಯಾಗುತ್ತಿದೆ. ಇದಾದ ಕೂಡಲೇ ಅಂದರೆ ಒಂದೆರಡು ದಿನದಲ್ಲೇ ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ಖಚಿತಪಡಿಸಿವೆ.

ಯೋಜನೆ ಜಾರಿಯಾದರೆ 1.40 ಕೋಟಿ ಕುಟುಂಬಗಳಿಗೆ ಸರ್ಕಾರದ ವೆಚ್ಚದಲ್ಲೇ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ. ಜತೆಗೆ ಕೆಪಿಎಂಇ ಕಾಯ್ದೆ ನಿಯಮಗಳ ಪ್ರಕಾರ ಹಣ ಇಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಹಾಗೂ ಚಿಕಿತ್ಸಾ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶವ ಒತ್ತೆಯಿಟ್ಟುಕೊಳ್ಳುವಂತಿಲ್ಲ.

ಯೂನಿವರ್ಸಲ್ ಹೆಲ್ತ್ ಕವರೇಜ್ ಜಾರಿಗೊಂಡ ಬಳಿಕ ಎಲ್ಲಾ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೂ ಚಿಕಿತ್ಸೆಗೆ ರಾಜ್ಯ ಸರ್ಕಾರ ಧನ ಸಹಾಯ ಮಾಡುತ್ತದೆ. ಹೀಗಾಗಿ ಖಾಸಗಿ ವೈದ್ಯರು ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡಬೇಕಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ವರಿಗೂ ಆರೋಗ್ಯ ಸೇವೆ: ಯೂನಿವರ್ಸಲ್ ಹೆಲ್ತ್ ಕವರೇಜ್ ಯೋಜನೆಯನ್ನು ನವೆಂಬರ್ 1ರಿಂದಲೇ ಜಾರಿಗೊಳಿಸುವುದಾಗಿ ಸಚಿವ ಸಂಪುಟ ಸಭೆಯಲ್ಲಿ ಹಿಂದೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಯೋಜನೆಯಡಿ ಈಗಾಗಲೇ ಸುವರ್ಣ ಆರೋಗ್ಯ ಟ್ರಸ್ಟ್ ಅಡಿ ಇರುವ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಜ್ಯೋತಿ ಸಂಜೀವಿನಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಹರೀಶ್ ಸಾಂತ್ವನ, ಯಶಸ್ವಿನಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಸೇರಿ ಏಳು ಯೋಜನೆಗಳನ್ನು ಆರೋಗ್ಯ ಭಾಗ್ಯ ಅಡಿಗೆ ತರಲಾಗುತ್ತದೆ.

ಈ ಬಗ್ಗೆ ಮಾರ್ಗಸೂಚಿಗಳು ಸೃಷ್ಟಿಯಾಗುತ್ತಿದ್ದು, ಈಗಿನ ಲೆಕ್ಕಾಚಾರದ ಪ್ರಕಾರ ಯೋಜನೆಗೆ ಅಂದಾಜು 869.40 ಕೋಟಿ ಬೇಕಾಗಬಹುದು. ವರ್ಗ-ಎ ಮತ್ತು ವರ್ಗ-ಬಿ ಎಂದು ಎರಡು ವಿಭಾಗಗಳನ್ನು ಮಾಡಲಾಗುತ್ತಿದೆ. ಸರ್ಕಾರ ಭರಿಸುವ ವೆಚ್ಚದಲ್ಲಿ ‘ಎ’ ವರ್ಗದಲ್ಲಿ ಸೇರುವವರಿಗೆ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ. ವರ್ಗ- ಬಿ ವ್ಯಾಪ್ತಿಯಲ್ಲಿ ಬರುವವರಿಗೆ ಜಟಿಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.30ರಿಯಾಯಿತಿ ಸಿಗಲಿದೆ.

ಆದರೆ ಸರ್ಕಾರದ ಯೋಜನೆಗಳಡಿ ಉಚಿತ ಚಿಕಿತ್ಸೆ ಪಡೆಯುವವರು ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕು. ಅಲ್ಲಿ ಸೇವೆ ಲಭ್ಯವಿಲ್ಲ ಎಂಬುದರ ದೃಢೀಕರಣ ಪತ್ರ ಪಡೆದು ಬಳಿಕವಷ್ಟೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಬಹುದು. ಮುಖ್ಯಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯ್ತಿ ಸದಸ್ಯನವರೆಗೆ ಯಾರೇ ಆಗಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆಯದಿದ್ದರೆ ವೈದ್ಯಕೀಯ ಪರಿಹಾರ ಲಭ್ಯವಿರುವುದಿಲ್ಲ ಎಂಬುದಾಗಿ ನಿಯಮಾವಳಿ ರೂಪಿಸಲಾಗುತ್ತಿದೆ.

ಸರ್ಕಾರದಿಂದ ಶೇ.95 ಚಿಕಿತ್ಸಾ ದರ ನಿಗದಿ: ಕೆಪಿಎಂಇ ಕಾಯ್ದೆ ಪ್ರಕಾರ ಸರ್ಕಾರಿ ಯೋಜನೆ ವ್ಯಾಪ್ತಿಗೆ ಬರುವ ರೋಗಿಗಳು ಪಡೆಯುವ ಚಿಕಿತ್ಸೆಯ ದರಗಳನ್ನು ಸರ್ಕಾರವೇ ನಿರ್ಧರಿಸುತ್ತದೆ. ಶೇ.30ರಷ್ಟು ಮಂದಿ ವಿವಿಧ ಸರ್ಕಾರಿ ಉದ್ಯೋಗಿಗಳ ಕುಟುಂಬಗಳು, ಯುಎಚ್‌ಸಿ ‘ಎ’ ವರ್ಗದವರು ಸೇರಿ ಶೇ.95ರಷ್ಟು ಜನರು ಆರೋಗ್ಯ ಭಾಗ್ಯ ಯೋಜನೆಯಡಿ ಬರುತ್ತಾರೆ. ಇವರೆಲ್ಲರೂ ಸರ್ಕಾರದ ಯೋಜನೆಯಡಿಯೇ ಚಿಕಿತ್ಸೆ ಪಡೆಯುವುದರಿಂದ ಕೆಪಿಎಂಇ ತಿದ್ದುಪಡಿ ನಿಯಮದಂತೆ ಸರ್ಕಾರ ವಿಧಿಸಿದಷ್ಟೇ ದರವನ್ನು ಖಾಸಗಿ ಆಸ್ಪತ್ರೆಗಳು ಪಡೆಯಬೇಕು. ಆದರೆ ಆರೋಗ್ಯ ಭಾಗ್ಯದಡಿ ಎ ವರ್ಗದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಘೋಷಿಸಿದ್ದು, ಗರಿಷ್ಠ ಚಿಕಿತ್ಸಾ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ ಎಂದು ತಿಳಿದು ಬಂದಿದೆ.

loader