ನಿವೃತ್ತ ಸೈನಿಕರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಸನ್ಮಾನಗಳು ಆಗಬೇಕಾ? ನಮ್ಮ ಕುಂದು ಕೊರತೆ ಆಲಿಸುವುದು ಬಿಟ್ಟು ಬೇರೆಲ್ಲಾ ನಡೆಸುತ್ತಿದ್ದಾರೆ. ಇದು ಮಾಜಿ ಯೋಧರಿಗೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಿ ಕಾರ್ಯಕ್ರಮ ಬಹಿಷ್ಕರಿಸಿದರು. ಈ ವೇಳೆ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತು.
ಬೆಂಗಳೂರು(ಮೇ 17): ಬ್ರಿಗೇಡ್ ರಸ್ತೆಯಲ್ಲಿ ದುರಸ್ತಿಗೊಂಡಿರುವ ‘ಯುದ್ಧ ಸ್ಮಾರಕ'ದ ಉದ್ಘಾಟನಾ ಸಮಾರಂಭದ ವೇಳೆ ಮುಖ್ಯಮಂತ್ರಿಗಳು ತಮ್ಮ ಕುಂದುಕೊರತೆ ಆಲಿಸಲಿಲ್ಲ ಎಂದು ಆರೋಪಿಸಿ 20ಕ್ಕೂ ಹೆಚ್ಚು ಮಾಜಿ ಯೋಧರು ಕಾರ್ಯಕ್ರಮ ಬಹಿಷ್ಕರಿಸಿದ ಘಟನೆ ನಡೆಯಿತು.
ಸ್ಮಾರಕ ಉದ್ಘಾಟಿಸಿ ಮುಖ್ಯಮಂತ್ರಿಗಳು ಭಾಷಣ ಆರಂಭಿಸುತ್ತಿದ್ದಂತೆ ಒಮ್ಮೆಲೆ ಮೇಲೆದ್ದ ನಿವೃತ್ತ ಯೋಧರು, ಕುಂದುಕೊರತೆ ಆಲಿಸುವುದಾಗಿ ಹೇಳಿ ನಮ್ಮನ್ನು ಇಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಆದರೆ, ಯಾರೂ ಆಲಿಸುತ್ತಿಲ್ಲ. ಶಾಸಕ ಹ್ಯಾರಿಸ್ ಸರ್ಕಾರಕ್ಕೆ ನಾಲ್ಕು ವರ್ಷ ಪೂರೈಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಸನ್ಮಾನ ಮಾಡಿದರು.
ನಿವೃತ್ತ ಸೈನಿಕರ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಸನ್ಮಾನಗಳು ಆಗಬೇಕಾ? ನಮ್ಮ ಕುಂದು ಕೊರತೆ ಆಲಿಸುವುದು ಬಿಟ್ಟು ಬೇರೆಲ್ಲಾ ನಡೆಸುತ್ತಿದ್ದಾರೆ. ಇದು ಮಾಜಿ ಯೋಧರಿಗೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಿ ಕಾರ್ಯಕ್ರಮ ಬಹಿಷ್ಕರಿಸಿದರು. ಈ ವೇಳೆ ಕೆಲಹೊತ್ತು ಗೊಂದಲದ ವಾತಾವರಣ ಉಂಟಾಯಿತು.
ಇದರ ನಡುವೆಯೇ ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ನಿವೃತ್ತ ಸೈನಿಕರ ಆರ್ಥಿಕ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ, ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳವ ಭರವಸೆ ನೀಡಿದರು. ಬಳಿಕ ನಿವೃತ್ತ ಸೈನಿಕರ ಮನವೊಲಿಸಲು ನಿವೃತ್ತ ಸೈನಿಕ ಜಿ.ಬಿ. ಅತ್ರಿ ಅವರಿಗೆ ಮಾತನಾಡಲು ಅವಕಾಶ ನೀಡಿದರು. ಆಗ ಅತ್ರಿ, ಯುದ್ಧ ಸ್ಮರಣ ಸ್ಮಾರಕವನ್ನು ಸರ್ಕಾರ ಉತ್ತಮವಾಗಿ ದುರಸ್ತಿ ಮಾಡಿದೆ. ಕೆಲವರು ತಮ್ಮ ಸ್ವಂತ ಸಮಸ್ಯೆ ಮುಂದಿಟ್ಟುಕೊಂಡು ಗದ್ದಲವೆಬ್ಬಿಸಿದ್ದಾರೆ. ಇದು ಸರಿಯಲ್ಲ ಎಂದರು.
ಕನ್ನಡಪ್ರಭ ವಾರ್ತೆ
epaper.kannadaprabha.in