ನವದೆಹಲಿ[ಜು.22]: ಬಿಗಿಭದ್ರತೆ ಹೊಂದಿರುವ ಸೇನಾ ನೆಲೆಗಳ ಮೇಲೆ ಭಯೋತ್ಪಾದಕರ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ದಾಳಿ ನಡೆದ ಸಂದರ್ಭದಲ್ಲಿ ಆ ಸೇನಾ ನೆಲೆಗಳ ಜವಾಬ್ದಾರಿ ಹೊತ್ತುಕೊಂಡಿದ್ದ ಕಮಾಂಡರ್‌ಗಳನ್ನು ಮನೆಗೆ ಕಳಿಸಲು ಮುಂದಾಗಿದೆ.

ಕಮಾಂಡರ್‌ಗಳ ಭದ್ರತಾ ವೈಫಲ್ಯದಿಂದಲೇ ಭಯೋತ್ಪಾದಕ ದಾಳಿಗಳು ನಡೆದಿವೆ ಎಂಬ ನಿಲುವಿಗೆ ಬಂದಿರುವ ಕೇಂದ್ರ ಸರ್ಕಾರ, ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭಾಗವಾಗಿ ಅಧಿಕಾರಿಗಳನ್ನು ಕೆಲಸದಿಂದ ಕಿತ್ತೊಗೆಯಲು ನಿರ್ಧರಿಸಿದೆ ಎಂದು ಹೇಳಲಾಗಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಭಾರತೀಯ ಸೇನೆಗೆ ತನ್ನ ಶಿಫಾರಸನ್ನು ಕಳುಹಿಸಿದೆ. ಸಂಬಂಧಿಸಿದ ಕಮಾಂಡರ್‌ಗಳು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ನಿವೃತ್ತಿ ಹೊಂದಬೇಕು. ಅವರಿಗೆ ನಿವೃತ್ತಿ ನಂತರ ಸಿಗಬೇಕಾದ ಎಲ್ಲ ಸೌಲಭ್ಯಗಳು ದಕ್ಕಲಿವೆ ಎಂದು ತಿಳಿಸಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೇಂದ್ರದಿಂದ ಈ ಸೂಚನೆ ಬಂದಿದೆ. ಅದರಂತೆ, ಸಂಬಂಧಿಸಿದ ಕಮಾಂಡರ್‌ಗಳಿಗೆ ರಾಜೀನಾಮೆ ಪತ್ರ ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

2016ರಲ್ಲಿ ಉರಿ ಬ್ರಿಗೇಡ್‌, ನಗರೋಟಾ ನೆಲೆ ಹಾಗೂ 2018ರಲ್ಲಿ ಸಂಜುವಾನ್‌ ಕ್ಯಾಂಪ್‌ಗಳ ಮೇಲೆ ದಾಳಿ ನಡೆದು 36 ಯೋಧರು ಹತರಾಗಿದ್ದರು. ಉರಿ ನೆಲೆ ಮೇಲೆ 2016ರ ಸೆ.18ರಂದು ದಾಳಿಯಾಗಿ 19 ಯೋಧರು ಹತರಾಗಿದ್ದಕ್ಕೆ ಪ್ರತಿಯಾಗಿ ಭಾರತ ಮೊತ್ತ ಮೊದಲ ಸರ್ಜಿಕಲ್‌ ಸ್ಟ್ರೈಕ್ ನಡೆಸಿತ್ತು.