ಭೂಸೇನೆಗೆ ಮುಖ್ಯಸ್ಥರನ್ನು ನೇಮಿಸುವಾಗ ಅಧಿಕಾರಿಯ ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಆದರೆ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ  ಕೇಂದ್ರ ಸರ್ಕಾರ ಲೆ|ಜ| ಬಕ್ಷಿ ಹಾಗೂ ಲೆ|ಜ| ಪಿಏ ಹಾರಿಜ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿದೆ.

ನವದೆಹಲಿ (ಡಿ.18): ಭೂಸೇನೆಗೆ ನೂತನ ಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ವಿವಾದವನ್ನು ಹುಟ್ಟುಹಾಕಿದೆ. ನೇಮಕ ಪ್ರಕ್ರಿಯೆಯಲ್ಲಿ ದೇಶದಲ್ಲಿ ನಡೆದು ಬಂದ ಸಂಪ್ರದಾಯವನ್ನು ಪಾಲಿಸಲಾಗಿಲ್ಲವೆಂಬ ಆರೋಪ ಕೇಳಿಬಂದಿದೆ.

ಭೂಸೇನೆಗೆ ಮುಖ್ಯಸ್ಥರನ್ನು ನೇಮಿಸುವಾಗ ಅಧಿಕಾರಿಯ ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು ದಶಕಗಳಿಂದ ನಡೆದು ಬಂದ ಸಂಪ್ರದಾಯ. ಆದರೆ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ ಕೇಂದ್ರ ಸರ್ಕಾರ ಲೆ|ಜ| ಬಕ್ಷಿ ಹಾಗೂ ಲೆ|ಜ| ಪಿಏ ಹಾರಿಜ್ ಅವರ ಸೇವಾ ಹಿರಿತನವನ್ನು ಕಡೆಗಣಿಸಿದೆ.

ಆದರೆ ಸೇವಾ ಹಿರಿತನವನ್ನು ನಿರ್ಲಕ್ಷಿಸಿ ಸೇನೆಯ ಮುಖ್ಯಸ್ಥರನ್ನು ನೇಮಿಸಿರುವುದು ಮೊದಲ ಬಾರಿಯಲ್ಲ. 1983ರಲ್ಲಿ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಲೆ|ಜ| ಎಸ್.ಕೆ ಸಿನ್ಹಾ ಅವರ ಸೇವಾ ಹಿರಿತನ ಪರಿಗಣಿಸದೇ ಲೆ|ಜ| ಏ.ಎಸ್.ವೈದ್ಯ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಅದನ್ನು ಪ್ರತಿಭಟಿಸಿ ಲೆ|ಜ| ಎಸ್.ಕೆ ಸಿನ್ಹಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

1972ರಲ್ಲಿ ಇಂದಿರಾ ಗಾಂಧಿಯವರಿಂದಾಗಿ ವಿಶ್ವಯುದ್ಧ-2ರಲ್ಲಿ ವಿಕ್ಟೋರಿಯಾ ಕ್ರಾಸ್ ಗೌರವಕ್ಕೆ ಪಾತ್ರರಾಗಿದ್ದ ಲೆ|ಜ| ಪಿ.ಎಸ್.ಭಗತ್ ಅವರಿಗೆ ಭೂಸೇನಾ ಮುಖ್ಯಸ್ಥ ಹುದ್ದೆ ಕೈತಪ್ಪಿತ್ತು. ಲೆ|ಜ| ಜಿ.ಜಿ. ಬೇವೂರ್ ಅವರ ಸೇವೆಯನ್ನು ಒಂದು ವರ್ಷ ವಿಸ್ತರಿಸುವ ಮೂಲಕ, ಜ| ಸ್ಯಾಮ್ ಮಾಣೆಕ್ ಶಾ (ಫೀಲ್ಡ್ ಮಾರ್ಶಲ್) ಬಳಿಕ ಅವರು ಸೇನೆಯ ಸಾರಥ್ಯ ವಹಿಸಿದರು. ಸೇವಾ ಹಿರಿತನದ ಆಧಾರದಲ್ಲಿ ಮುಖ್ಯಸ್ಥರಾಗಬೇಕಾಗಿದ್ದ ಲೆ|ಜ| ಪಿ.ಎಸ್.ಭಗತ್ ಅದೇ ವರ್ಷ ನಿವೃತ್ತರಾದುದರಿಂದ ಮುಖ್ಯಸ್ಥನ ಹುದ್ದೆ ಅವರ ಕೈತಪ್ಪಿದಂತಾಯಿತು.