ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ನಾವೇನು ಕಾಂಗ್ರೆಸ್‌ ಗುಲಾಮರಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೇವೆಯೇ? ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳೂರು: ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ನಾವೇನು ಕಾಂಗ್ರೆಸ್ ಗುಲಾಮರಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೇವೆಯೇ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ‘ಟೇಕನ್ ಫಾರ್ ಗ್ರಾಂಟೆಡ್' ಎಂದು ತಿಳಿದುಕೊಂಡಿದ್ದಾರೆ. ಇಲ್ಲದಿದ್ದರೆ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭದಲ್ಲೇ ಜೆಡಿಎಸ್ಅನ್ನು ಸಂಪರ್ಕಿಸಲು ಮುಖ್ಯಮಂತ್ರಿಗೆ ಎಲ್ಲಿ ಹೋಗಿತ್ತು ಜ್ಞಾನ? ಆರಂಭದಲ್ಲಿ ಯಾರೂ ಪಕ್ಷವನ್ನು ಸಂಪರ್ಕಿಸಲಿಲ್ಲ. ಕೊನೆಯವರೆಗೂ ನಮ್ಮ ಸಂಪರ್ಕದಲ್ಲಿ ಅವರು ಇರಲೇ ಇಲ್ಲ. ಅವಿಶ್ವಾಸ ನಿರ್ಣಯಕ್ಕೆ ಪಕ್ಷೇತರ ಶಾಸಕರು ಕೈಜೋಡಿಸಲಿದ್ದಾರೆ, ಜೆಡಿಎಸ್ ಅಗತ್ಯವಿಲ್ಲ ಎಂದೇ ತಿಳಿದುಕೊಂಡಿದ್ದರು. ಕೊನೇ ಘಟ್ಟದಲ್ಲಿ ಪಕ್ಷೇತರರ ಬೆಂಬಲದ ಕೊರತೆಯಾದಾಗಲಷ್ಟೇ ತರಾತುರಿಯಲ್ಲಿ ನಮ್ಮ ಕಡೆ ಬಂದರು ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕೃತಜ್ಞತೆ ಎಂಬ ಪದದ ಅರ್ಥವೇ ಗೊತ್ತಿಲ್ಲ. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಅವರ ಗೆಲುವಿಗೆ ಕಾರಣ ನಾವು ಎಂಬುದನ್ನೇ ಮರೆತ ಮುಖ್ಯಮಂತ್ರಿಗಳು, ಈಗ ಕೋಮುವಾದಿಗಳ ಜೊತೆ ಕೈ ಜೋಡಿಸಿದವರೆಂದು ನಮ್ಮನ್ನು ಮೂದಲಿಸಿದ್ದಾರೆ ಎಂದು ಕಿಡಿಕಾರಿದರು.
ಅವಿಶ್ವಾಸ ಮಂಡನೆಯಲ್ಲಿ ವಿಫಲರಾದ ಬಳಿಕ ‘ಜೆಡಿಎಸ್ ಪಕ್ಷ ಕೋಮುವಾದಿಗಳೊಂದಿಗೆ ಕೈಜೋಡಿಸಿತ್ತು' ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಜಾತ್ಯತೀತ ಮೌಲ್ಯಗಳನ್ನು ನಾನು ಸಿದ್ದರಾಮಯ್ಯ ಅವರಿಂದ ಕಲಿಯಬೇಕಿಲ್ಲ ಎಂದು ಹೇಳಿದರು.
