ಪಣಜಿ[ಜ.24]: ಪ್ರಾಕೃತಿಕ ವೈಪರಿತ್ಯದ ಕಾರಣದಿಂದ ಗೋವಾದ ಮೋರ್ಜಿಂ ಬೀಚ್‌ನಲ್ಲಿನ ನೀರು ಸುಮಾರು 1.5 ಕಿ.ಮೀ.ನಷ್ಟುಹಿಂದೆ ಸರಿದು ಆತಂಕ ಸೃಷ್ಟಿಸಿದ ಘಟನೆ ಮಂಗಳವಾರ ನಡೆದಿದೆ.

‘ಸಮುದ್ರದ ನೀರು ಇದ್ದಕ್ಕಿದ್ದಂತೇ ಒಂದೂವರೆ ಕಿಲೋಮೀಟರ್‌ನಷ್ಟುಆಚೆ ಸರಿಯಿತು. ಸಮುದ್ರ ಇದ್ದ ಪ್ರದೇಶದಲ್ಲಿ ಖಾಲಿ ನೆಲ ಕಾಣಿಸತೊಡಗಿತು’ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳಾದ ಮೋರ್ಜಿಂ ನಿವಾಸಿಗಳು ಹೇಳಿದ್ದಾರೆ. ಈ ವಿಸ್ಮಯದಿಂದ ಅಚ್ಚರಿ ಹಾಗೂ ಆತಂಕಕ್ಕೆ ಒಳಗಾದ ಕೆಲವು ಪ್ರವಾಸಿಗರು ನೀರು ಸರಿದ ಪ್ರದೇಶದಲ್ಲಿ ಸರಿದಾಡಿ ಮೋಜು ಕೂಡ ಅನುಭವಿಸಿದರು.

ಕಳೆದ ಡಿಸೆಂಬರ್‌ 23ರಂದು ಇದೇ ರೀತಿಯ ಘಟನೆ ನಡೆದಿತ್ತು. ಇನ್ನು ಸೋಮವಾರ ಸಂಜೆ ಕೂಡ ಇದೇ ರೀತಿ ಆಯಿತು. ಬಳಿಕ ಮಂಗಳವಾರ 1.5 ಕಿ.ಮೀ.ನಷ್ಟುಸಮುದ್ರವು ತೀರದಿಂದ ದೂರ ಸರಿಯಿತು. ಆಗ ಸಮುದ್ರಜೀವಿಗಳು ಬಯಲಿಗೆ ಬಂದಂತಾಗಿ ಅವುಗಳನ್ನು ತಿನ್ನಲು ಪಕ್ಷಿಗಳ ಹಿಂಡೇ ಬಂದ ದೃಶ್ಯ ಗೋಚರಿಸಿತು ಎಂದು ಅವರು ಹೇಳಿದರು.

ಒಮ್ಮಿಂದೊಮ್ಮೆಲೇ ಭಾರಿ ಅಲೆಗಳು ಏಳುವುದು ಹಾಗೂ ಏಕಾಏಕಿ ಅಲೆಗಳ ಅಬ್ಬರ ಕಡಿಮೆಯಾಗಿ, ಕಮ್ಮಿ ಎತ್ತರದ ಅಲೆಗಳು ಏಳುವ ವ್ಯತ್ಯಾಸ ಕಂಡುಬಂತು.

ಕೆಲವೊಮ್ಮೆ ಬೇಸಿಗೆಯಲ್ಲಿ ಈ ಥರ ಆಗಿದ್ದಿದೆ. ಆದರೆ ಈ ಅವಧಿಯಲ್ಲಿ ಇದು ಸಂಭವಿಸಿದ್ದು ಇದೇ ಮೊದಲು ಎಂದು ಗ್ರಾಮಸ್ಥರು ಹೇಳುತ್ತಾರೆ.

ಕಾರಣ ಏನು?

ಹೆಚ್ಚು ಇಳಿಜಾರು ಪ್ರದೇಶದಲ್ಲಿ ಇರುವ ಸಮುದ್ರ ತೀರಗಳಲ್ಲಿ ಹೀಗೆ ಆಗುವುದಿದೆ. ಮೋರ್ಜಿ ಕೂಡ ಇಳಿಜಾರಿನಲ್ಲಿದೆ. ಇತ್ತೀಚೆಗೆ ಸಂಭವಿಸಿದ ಚಂದ್ರಗ್ರಹಣ ಹಾಗೂ ಕೆಂಬಣ್ಣದ ಚಂದ್ರ ಕಾಣಿಸಿದ ಪರಿಣಾಮವು ಸಮುದ್ರದ ಮೇಲೆಯೂ ಆಗಿದ್ದು, ಅಲೆಗಳ ಏರುಪೇರು ಆಗಿದೆ. ಹೀಗಾಗಿ ಇಳಿಜಾರಿನಲ್ಲಿರುವ ಮೋರ್ಜಿಂ ತೀರದಲ್ಲಿನ ನೀರು ಇಳಿದು, ದೂರ ಸರಿದು ಹೋಗಿದೆ ಎಂದು ರಾಷ್ಟ್ರೀಯ ಸಮುದ್ರಶಾಸ್ತ್ರ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.