Asianet Suvarna News Asianet Suvarna News

ಆ್ಯಪ್‌ ಟ್ಯಾಕ್ಸಿ, ಆನ್‌ಲೈನ್‌ ವ್ಯಾಪಾರ ಇಲಾಖೆ ವ್ಯಾಪ್ತಿಗೆ: ಸಚಿವ ಖಾದರ್‌

App Taxi Online Includes to Department Says Khadar

ಮಂಗಳೂರು (ಸೆ.12):ಗ್ರಾಹಕರ ಹಕ್ಕು ಬಲಿಷ್ಠಗೊಳಿಸುವ ಉದ್ದೇಶದಿಂದ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ, ನೇರ ಮಾರುಕಟ್ಟೆಮತ್ತು ಆನ್‌ಲೈನ್‌ ವ್ಯಾಪಾರ ವ್ಯವಸ್ಥೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯಾಪ್ತಿಗೆ ಒಳಪಡಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಈ ಮೂರು ಗ್ರಾಹಕ ಸೇವೆಗಳು ಇಲಾಖೆ ವ್ಯಾಪ್ತಿಯಲ್ಲಿ ಈವರೆಗೆ ಇರಲಿಲ್ಲ. ಇದರಿಂದಾಗಿ ಗ್ರಾಹಕರಿಗೆ ಅನ್ಯಾಯವಾಗುತ್ತಿರುವ ಕುರಿತು ದೂರುಗಳಿವೆ. ಇದನ್ನು ತಪ್ಪಿಸಿ ಏಕರೂಪದ ನಿಯಮ ಜಾರಿಗೊಳಿಸುವ ಉದ್ದೇಶದಿಂದ ಈಗಾಗಲೇ ಉನ್ನತ ಮಟ್ಟದ ಚರ್ಚೆಯನ್ನೂ ನಡೆಸಲಾಗಿದೆ. ಕಾನೂನು ಸಲಹೆ ಪಡೆದುಕೊಂಡು ಹಂತಹಂತವಾಗಿ ಈ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಆ್ಯಪ್‌ ಆಧರಿತ ಟ್ಯಾಕ್ಸಿಗಳಿಗೆ ಈಗ ಅವರದ್ದೇ ಆದ ಮೀಟರ್‌ ವ್ಯವಸ್ಥೆಯಿದ್ದು, ಗ್ರಾಹಕರಿಗೆ ಅನ್ಯಾಯವಾಗುವ ಸಾಧ್ಯತೆಗಳಿವೆ. ಆದ್ದರಿಂದ ರಾಜ್ಯದ ಬೇರೆ ಟ್ಯಾಕ್ಸಿಗಳಿಗೆ ಅನ್ವಯಿಸುವ ನಿಯಮಗಳನ್ನು ಆ್ಯಪ್‌ ಆಧರಿತ ಟ್ಯಾಕ್ಸಿಗಳಿಗೂ ಅನ್ವಯಿಸಲಾಗುವುದು. ಏಕರೂಪದ ಮೀಟರ್‌ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದರು.

ರಾಜ್ಯದಲ್ಲಿ ದೊಡ್ಡ ಕಂಪನಿಗಳು ನೇರ ಮಾರುಕಟ್ಟೆಯ ಮೇಲೆ ಹಿಡಿತ ಹೊಂದಿವೆ. ಅದೇ ರೀತಿ ಆನ್‌ಲೈನ್‌ ವ್ಯಾಪಾರ ವ್ಯವಸ್ಥೆಯಿಂದಲೂ ಗ್ರಾಹಕರು ವಂಚನೆಗೆ ಒಳಗಾಗುವ ಅಪಾಯ ಇದ್ದೇ ಇದೆ. ಇನ್ನು ಮುಂದೆ ಇಂತಹ ಮಾರಾಟ ವ್ಯವಸ್ಥೆಯನ್ನು ಇಲಾಖೆ ವ್ಯಾಪ್ತಿಗೆ ತರುವುದರಿಂದ ವಂಚನೆಗೆ ಕಡಿವಾಣ ಬೀಳಲಿದೆ. ಕಂಪನಿಗಳು ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವ ಕುರಿತು ನಿಯಮ ರೂಪಿಸಲಾಗುತ್ತದೆ ಎಂದು ಯು.ಟಿ. ಖಾದರ್‌ ಹೇಳಿದರು.

ಮಾಪನ ಯಂತ್ರ ಅಳವಡಿಕೆ: ರಾಜ್ಯದಲ್ಲಿ ನೂರಾರು ಸೂಪರ್‌ ಮಾರ್ಕೆಟ್‌ಗಳು, ಹೈಪರ್‌ ಮಾರ್ಕೆಟ್‌ಗಳಿವೆ. ಅಲ್ಲಿ ಅವರದ್ದೇ ಆದ ಮಾಪನಯಂತ್ರಗಳನ್ನು ಅಳವಡಿಸಿದ್ದಾರೆ. ಈ ವ್ಯವಸ್ಥೆಯನ್ನು ಬದಲಾಯಿಸಿ, ಸರ್ಕಾರದ ಮಾಪನ ಯಂತ್ರಗಳನ್ನು ಅಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಪ್ರಥಮ ಹಂತದಲ್ಲಿ 450 ಸೂಪರ್‌ ಮಾರ್ಕೆಟ್‌ಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.

ಎಪಿಎಂಸಿಗಳಲ್ಲಿ ಕಣ್ಗಾವಲು: ಎಂಪಿಎಂಸಿಗಳಲ್ಲಿ ರೈತರು ತರುವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಬೇಕಾದರೆ ಅವರ ಉತ್ಪನ್ನಗಳ ತೂಕವನ್ನೂ ಸರಿಯಾಗಿ ಮಾಪನ ಮಾಡಬೇಕಾಗುತ್ತದೆ. ರೈತರ ಉತ್ಪನ್ನಗಳನ್ನು ತೂಕ ಮಾಡುವಾಗ ಅನ್ಯಾಯ ಎಸಗಬಹುದಾದ ಸಾಧ್ಯತೆಯೂ ಇರುವುದರಿಂದ ಈ ಕುರಿತು ಸೂಕ್ತ ಕಣ್ಗಾವಲು ಇರಿಸಲಾಗುತ್ತದೆ ಎಂದು ಖಾದರ್‌ ಭರವಸೆ ನೀಡಿದರು.

Latest Videos
Follow Us:
Download App:
  • android
  • ios