ಧಾರವಾಡ (ಜ. 06): ಡಬ್ಬಿಂಗ್ ಕನ್ನಡಕ್ಕೆ ಹೊಸತಲ್ಲ. ಹಿಂದೆಯೂ ಇತ್ತು. ಆದರೆ ರಾಜಕುಮಾರ್ ಮುಂಚೂಣಿಯಲ್ಲಿ ನಿಂತು ನಡೆಸಿದ ಹೋರಾಟದಲ್ಲಿ ಡಬ್ಬಿಂಗ್ ಕೊನೆಗೊಂಡಿತು. ಹೀಗಾಗಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳು ಬಂದವು. ಆದರೆ ಈಗ ರಾಜಕುಮಾರ್ ಇಲ್ಲ. ನಾಯಕತ್ವದ ಕೊರತೆಯಿದೆ. ಡಬ್ಬಿಂಗ್ ವಿರೋಧಕ್ಕೆ ಕಾನೂನಿನ ಬೆಂಬಲವೂ ಇಲ್ಲದೆ ಇರುವುದರಿಂದ ಡಬ್ಬಿಂಗ್ ಮಾಡಲು ಹೊಂಚು ಹಾಕುತ್ತಿದ್ದ ಕಳ್ಳರು ಧೈರ್ಯ ಮಾಡಿದ್ದಾರೆ ಎಂದು ಸಿನಿಮಾ ನಿರ್ದೇಶಕ ನಂಜುಂಡೇಗೌಡ ಎಚ್ಚರಿಕೆ ನೀಡಿದ್ದಾರೆ.

ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಕನ್ನಡ ಚಲನಚಿತ್ರಮತ್ತು ಕಿರುತೆರೆ ಗೋಷ್ಠಿಯಲ್ಲಿ ಡಬ್ಬಿಂಗ್, ರೀಮೇಕ್, ಪ್ರದರ್ಶನ ಮಂದಿರಗಳು ಇತ್ಯಾದಿ ಸವಾಲುಗಳ ಕುರಿತು ವಿಚಾರ ಮಂಡಿಸಿದ ಅವರು, ನಮ್ಮ ಸ್ಟಾರ್ ನಟರು ನಿರ್ಧಾರ ಮಾಡಿದರೆ ರೀಮೇಕ್ ತಡೆಯಬಹುದು. ಆದರೆ ನಮ್ಮ ಕಲಾವಿದರಿಗೂ ಸಾಮಾಜಿಕ ಜವಾಬ್ದಾರಿ ಬೇಕು ಎಂದು ಒತ್ತಿ ಹೇಳಿದರು.

ಸಿನಿಮಾ ಮತ್ತು ಕಿರುತೆರೆಗೆ ಹೊಸಬರು ನೀಡಿದ ಕೊಡುಗೆ ಬಗ್ಗೆಮಾತನಾಡಿದ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, ಪ್ರಾದೇಶಿಕ ಭಾಷೆಯ ನಿರ್ದೇಶಕ ಹೆಚ್ಚು ಜಾಗೃತನಾಗಿದ್ದಾನೆ. ಹೊಸ ಹೊಸ ವಸ್ತು ಮತ್ತು ಕಥೆಗಳನ್ನು ಹುಡುಕುತ್ತಿದ್ದಾನೆ. ಇವತ್ತು ಒಂದು ಪ್ರಾದೇಶಿಕ ಭಾಷೆಯ ಸಿನಿಮಾಕ್ಕೆ ಜಗತ್ತಿನ ಹಲವಾರು ಭಾಷೆಯ ಸಿನಿಮಾಗಳ ಪೈಪೋಟಿ ಇದೆ ಎಂದರು.

ಕಿರುತೆರೆ ಮತ್ತು ಸಾಮಾಜಿಕ ಸ್ವಾಸ್ಥ್ಯ ವಿಚಾರದ ಕುರಿತು ಮಾತಾಡಿದ ಪಿ.ಶೇಷಾದ್ರಿ, ಟೀವಿ ಸಮಾಜಕ್ಕೆ ಒಳ್ಳೆಯದನ್ನೇನೂ ಮಾಡಿಲ್ಲ. ಸೀರಿಯಲ್ ನೋಡುವುದರಿಂದ ಮಹಿಳೆ ಖಾಸಗಿತನ ಕಳೆದುಕೊಳ್ಳುತ್ತಾಳೆ. ರಂಜನೆ ಹೆಸರಲ್ಲಿ ಟೀವಿ ನಿಧಾನ ವಿಷಪ್ರಾಶನ ಮಾಡಿಸುತ್ತಿವೆ. ನಾವು ರಿಮೋಟು ಕಂಟ್ರೋಲ್ ಮೇಲೆ ಹತೋಟಿ ಹೊಂದಿದಾಗ ವೀಕ್ಷಕ ಪ್ರಭು ಆಗುತ್ತಾನೆ ಎಂದು ಶೇಷಾದ್ರಿ ಹೇಳಿದರು. ವಾರ್ತೆಗಳಲ್ಲಿ ರೋಚಕತೆ ಮತ್ತು ಆತಂಕ ಸೃಷ್ಟಿಸಲಾಗುತ್ತದೆ. ನಮ್ಮ ಸಮಯವನ್ನು ಟೀವಿ ಕಿತ್ತುಕೊಂಡಿದೆ. ಶಬ್ದಗಳ ಮೂಲಕ ನಮ್ಮ ಮನೆಯಲ್ಲಿ ಆತಂಕ ನಿರ್ಮಾಣ ಆಗಿದೆ. ರಿಯಾಲಿಟಿ ಶೋಗಳು ಮಕ್ಕಳ ಕಣ್ಣೀರನ್ನು ಲಾಭದ ಸರಕು ಮಾಡಿಕೊಂಡಿವೆ. ಬಿಗ್ ಬಾಸ್ ಕೂಡ ಮಂದಿಯ ನಡುವಿನ ಮಾನಸಿಕ ಹಿಂಸೆಯನ್ನು ತೋರಿಸುತ್ತಿದೆ ಎಂದು ಶೇಷಾದ್ರಿ ಪ್ರತಿಪಾದಿಸಿದರು. ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಚಂದ್ರು ವಹಿಸಿದ್ದರು. 

-ಜೋಗಿ