ಬೆಂಗಳೂರು(ಅ.5): ನಟ ದರ್ಶನ್ ಮನೆ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್ ಎಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳು ನೀಡಿದ್ದ ನೋಟಿಸ್ಗೆ ಪ್ರತಿಷ್ಠಿತರಿಂದ ಉತ್ತರ ಸಿಕ್ಕಿದೆ. ಸರ್ಕಾರಿ ಬಿ ಖರಾಬು ಭೂಮಿ ಒತ್ತುವರಿ ಮಾಡಿ ಬೆಂಗಳೂರಿನ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ನಲ್ಲಿ 84 ಸರ್ಕಾರಿ ನಿವೇಶನಗಳು ಒತ್ತುವರಿಯಾಗಿತ್ತು. ಈ ಸಂಬಂಧ ನಗರ ಜಿಲ್ಲಾಧಿಕಾರಿಗಳು ದಾಖಲೆ ಸಮೇತ ಉತ್ತರ ನೀಡುವಂತೆ ಇಂದಿಗೆ ಗಡುವು ನೀಡಿ ನೋಟಿಸ್ ಜಾರಿ ಮಾಡಿದ್ದರು. ಈ ನೋಟಿಸ್ಗೆ ಇಬ್ಬರು ಉತ್ತರ ನೀಡಿದ್ದಾರೆ.
ಬಿಡಿಎ ಅನುಮೋದಿತ ಲೇಔಟ್ನಲ್ಲಿ ಮನೆ ಹಾಗೂ ಆಸ್ಪತ್ರೆ ಇದೆ. ಹೀಗಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರತಿ ವರ್ಷ ಕಂದಾಯ ಕಟ್ಟಿ ವಾಸವಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ತಪ್ಪು ನಮ್ಮದಲ್ಲ ಎಂದು ಪರೋಕ್ಷವಾಗಿ ಬಿಡಿಎ ಕಡೆ ಬೊಟ್ಟು ಮಾಡಿದ್ದಾರೆ.
ನೋಟಿಸ್ಗೆ ಉತ್ತರ ನೀಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಿಡಿಎ ಅನುಮೋದನೆ ನೀಡಿ ಕಟ್ಟಿರುವ ಕಟ್ಟಡವನ್ನು ಖರೀದಿಸಿದ್ದೇವೆ. ಹಾಗಾಗಿ ತಮ್ಮಿಂದ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ, ತಾವು ಸಾರ್ವಜನಿಕರ ಸೇವೆ ಮಾಡುತ್ತಿದ್ದು , ಜಿಲ್ಲಾಡಳಿತ ತೆರವಿನಿಂದ ಆಗುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಟ್ಟು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ವಿ.ಶಂಕರ್ ಮಾತನಾಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
