ಕೊಲಂಬೋ[ಏ.24]: ತನ್ನ ಇತಿಹಾಸದಲ್ಲೇ ಕಂಡುಕೇಳರಿಯದ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿರುವ ಶ್ರೀಲಂಕಾ, ಉಗ್ರರು ಮತ್ತೊಮ್ಮೆ ಅಟ್ಟಹಾಸ ನಡೆಸಬಹುದು ಎಂಬ ಆತಂಕದ ಮಡುವಿನಲ್ಲಿದೆ. ಇದಕ್ಕೆ ಇಂಬು ನೀಡುವಂತೆ, ಸ್ಫೋಟಕ ತುಂಬಿದೆ ಎಂದು ಹೇಳಲಾದ ಟ್ರಕ್‌ ಹಾಗೂ ವ್ಯಾನ್‌ವೊಂದು ಕೊಲಂಬೋದತ್ತ ಬರುತ್ತಿದೆ ಎಂಬ ವರ್ತಮಾನ ಲಭಿಸಿದೆ.

ಆ ವಾಹನಗಳಿಗಾಗಿ ಶೋಧ ನಡೆಸುವ ಸಲುವಾಗಿ ಕೊಲಂಬೋದ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮತ್ತೊಂದೆಡೆ, ಲಂಕಾದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಏ.4ರಂದೇ ಭಾರತ ಮಾಹಿತಿ ಕೊಟ್ಟಿತ್ತು. ಎಲ್‌ಟಿಟಿಇ ಉಗ್ರ ಸಂಘಟನೆ ಮತ್ತೊಮ್ಮೆ ತಲೆ ಎತ್ತದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಗಮನ ನೀಡುತ್ತಿರುವ ಲಂಕಾ ಸರ್ಕಾರ, ಭಾರತದ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಒಂದು ದಾಳಿ ನಡೆಸಿದ ಬಳಿಕ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆ ಮತ್ತಷ್ಟುದಾಳಿ ನಡೆಸಬಹುದು ಎಂದೂ ಭಾರತ ಎಚ್ಚರಿಸಿತ್ತು. ಇದರ ನಡುವೆಯೇ ಸ್ಫೋಟಕ ತುಂಬಿರುವ ಟ್ರಕ್‌, ವ್ಯಾನ್‌ಗಾಗಿ ಲಂಕಾ ಶೋಧ ಆರಂಭಿಸಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.