Asianet Suvarna News Asianet Suvarna News

ಕಾಂಗ್ರೆಸ್‌, ಜೆಡಿಎಸ್‌ಗೆ ಎದುರಾಗಿದೆ ಮತ್ತೊಂದು ಆತಂಕ!

ಆಪರೇಷನ್‌ ಕಮಲ ಭೀತಿಯಿಂದಾಗಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗಿರುವ ಗೊಂದಲಮಯ ವಾತಾವರಣಕ್ಕೆ ಮತ್ತೊಂದು ಕ್ಲೈಮ್ಯಾಕ್ಸ್ ಎದುರಾಗಲಿದೆ. ಅ.3ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯೇ ಅಂತಿಮವಾಗುವ ಸಾಧ್ಯತೆ ಇದೆ.

Another Tension For Congress And JDS
Author
Bengaluru, First Published Sep 23, 2018, 7:13 AM IST

ಬೆಂಗಳೂರು :  ಆಪರೇಷನ್‌ ಕಮಲ ಭೀತಿಯಿಂದಾಗಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗಿರುವ ಗೊಂದಲಮಯ ವಾತಾವರಣಕ್ಕೆ ಅ.3ರಂದು ನಡೆಯಲಿರುವ ವಿಧಾನಪರಿಷತ್‌ ಚುನಾವಣೆಯೇ ಕ್ಲೈಮ್ಯಾಕ್ಸ್‌ ಆಗುವ ಸಾಧ್ಯತೆಯಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳ ಆಯ್ಕೆಗೆ ನಡೆಯಲಿರುವ ಈ ಚುನಾವಣೆಯಲ್ಲಿ ಕೇವಲ ಎಂಟು ಮತಗಳು ಮೈತ್ರಿಕೂಟದಿಂದ ಜಾರಿದರೂ ಬಿಜೆಪಿಯ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ.

ಇದು ಕೇವಲ ಬಿಜೆಪಿಯ ಅಭ್ಯರ್ಥಿಗಳ ಗೆಲುವನ್ನು ಸೂಚಿಸುವುದಿಲ್ಲ. ಅಡ್ಡಮತದಾನದ ಪರಿಣಾಮವಾಗಿ ಮೈತ್ರಿ ಕೂಟದ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂಬ ಸಂದೇಶವೂ ರವಾನೆಯಾಗುವಂತೆ ಮಾಡುತ್ತದೆ. ಈ ಸಂದೇಶ ದೊರಕಿದರೆ ಮುಂದಿನ ರಾಜಕೀಯ ಬೆಳವಣಿಗೆಗಳು ಅತಿ ಶೀಘ್ರವಾಗಿ ಹಾಗೂ ಮೈತ್ರಿಕೂಟ ಸರ್ಕಾರಕ್ಕೆ ಪ್ರತಿಕೂಲವಾಗಿ ನಡೆಯುವ ಸಂಭವವಿದೆ. ಹೀಗಾಗಿ ಇಂತಹ ಸನ್ನಿವೇಶವನ್ನು ತಪ್ಪಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ್‌, ಬಿಜೆಪಿಯ ಸೋಮಣ್ಣ ಹಾಗೂ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಈ ಮೂರು ಸ್ಥಾನಗಳಿಗೆ ಚುನಾವಣೆಯನ್ನು ಪ್ರತ್ಯೇಕವಾಗಿ ನಡೆಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಂದರೆ, ಪ್ರತಿ ಸ್ಥಾನಕ್ಕೂ ಪ್ರತ್ಯೇಕ ಮತ ಪತ್ರದಲ್ಲಿ ಶಾಸಕರು ಮತದಾನ ಮಾಡಬೇಕು.

ಪ್ರಸ್ತುತ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಪಕ್ಷೇತರ ಶಾಸಕರನ್ನು ಒಳಗೊಂಡ ಮೈತ್ರಿಕೂಟದ ಸಂಖ್ಯೆ 118 ಇದೆ. ಇನ್ನು ಬಿಜೆಪಿಯ ಸಂಖ್ಯಾಬಲ 104 ಇದೆ. ಅಡ್ಡ ಮತದಾನ ನಡೆಯದ ಪಕ್ಷದಲ್ಲಿ ಕಾಂಗ್ರೆಸ್‌ನ ಎರಡು ಹಾಗೂ ಜೆಡಿಎಸ್‌ನ ಒಬ್ಬರು ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಸಾಧಿಸಬಹುದು. ಆದರೆ, ಬಿಜೆಪಿ ನಡೆಸಿರುವ ಆಪರೇಷನ್‌ ಕಮಲದ ಪರಿಣಾಮವಾಗಿ ಈ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯಲಿದೆ ಎಂಬ ತೀವ್ರ ಆಶಂಕೆಯಿದೆ.

ಹೀಗೆ ಅಡ್ಡ ಮತದಾನ ನಡೆಯುವ ಸನ್ನಿವೇಶದಲ್ಲಿ ಬಿಜೆಪಿಯು ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು 112 ಮತಗಳನ್ನು ಕಡ್ಡಾಯವಾಗಿ ಪಡೆಯಬೇಕು. ಹಾಲಿ ಆ ಪಕ್ಷ ಹೊಂದಿರುವ 104 ಸ್ಥಾನಕ್ಕೆ ಇನ್ನು 8 ಮತಗಳು ಸೇರಿದರೆ 112 ಆಗುತ್ತದೆ. ಆಗ ಕಾಂಗ್ರೆಸ್‌-ಜೆಡಿಎಸ್‌-ಪಕ್ಷೇತರ ಮೈತ್ರಿಕೂಟದ ಸಂಖ್ಯೆ 110ಕ್ಕೆ ಕುಸಿಯುತ್ತದೆ.

ಆಪರೇಷನ್‌ ಕಮಲ ನಡೆಸಿ ಶಾಸಕರಿಂದ ರಾಜೀನಾಮೆ ಕೊಡಿಸಿ ಅನಂತರ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಎಂದು ಬಿಂಬಿಸುವುದಕ್ಕಿಂತ ವಿಧಾನಪರಿಷತ್ತಿನ ಮೂರು ಸ್ಥಾನಗಳಲ್ಲೂ ಮೈತ್ರಿಕೂಟವನ್ನು ಸೋಲಿಸಿ ತನ್ಮೂಲಕ ಮೈತ್ರಿಕೂಟವು ತನ್ನ ಶಾಸಕರ ಬೆಂಬಲವನ್ನೇ ಪರಿಪೂರ್ಣವಾಗಿ ಹೊಂದಿಲ್ಲ ಎಂದು ಬಿಂಬಿಸಲು ಬಿಜೆಪಿ ಯೋಜಿಸಿದೆ ಎನ್ನಲಾಗಿದೆ.

ಹೀಗೆ ಬಿಂಬಿಸಿದಾಗ, ತಮ್ಮ ಪಕ್ಷ ತೊರೆದು ಬಿಜೆಪಿಯ ಆಪರೇಷನ್‌ ಕಮಲಕ್ಕೆ ಒಳಗಾಗಲು ಮೀನಮೇಷ ಎಣಿಸುತ್ತಿರುವ ಹಲವು ಶಾಸಕರು ಮೈತ್ರಿಕೂಟಕ್ಕೆ ಸಂಖ್ಯಾಬಲ ಕಡಿಮೆಯಾಗಿದೆ ಎಂಬ ಭಾವನೆಯಲ್ಲಿ ಬಿಜೆಪಿಯತ್ತ ಹಾರಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದು. ಆಗ ಸರ್ಕಾರವನ್ನು ಅಲ್ಪಮತಕ್ಕೆ ಬೀಳುವಂತೆ ಮಾಡಿ ಅಧಿಕಾರ ಗಿಟ್ಟಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ ಎಂಬ ಶಂಕೆ ಮೈತ್ರಿಕೂಟಕ್ಕೆ ಇದೆ.

ಶಾಸಕಾಂಗ ಪಕ್ಷದ ಸಭೆ:  ಈ ಅಡ್ಡ ಮತದಾನದ ಭೀತಿ ಕಾಂಗ್ರೆಸ್‌ನಲ್ಲೇ ಹೆಚ್ಚಿರುವ ಹಿನ್ನೆಲೆಯಲ್ಲಿ ಸೆ.25ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ನಂತರ ಕಾಂಗ್ರೆಸ್‌ ಶಾಸಕರನ್ನು ರೆಸಾರ್ಟ್‌ಗೆ ಸಾಗಿಸುವ ಚಿಂತನೆಯೂ ಪಕ್ಷದ ವಲಯದಲ್ಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನ ಶಾಸಕರು ಚೆನ್ನೈಗೆ ತೆರಳಲಿದ್ದಾರೆ, ಮುಂಬೈಗೆ ಶಿಫ್ಟ್‌ ಆಗಿದ್ದಾರೆ ಎಂಬಿತ್ಯಾದಿ ವದಂತಿಗಳ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸಲು ಶಾಸಕಾಂಗ ಪಕ್ಷ ಸಭೆ ಸಹಕಾರಿಯಾಗಲಿದೆ.

ಅಲ್ಲದೆ, ನಿಜಕ್ಕೂ ಪಕ್ಷದ ಕೆಲ ಶಾಸಕರು ಬಿಜೆಪಿ ಪ್ರೇರಿತ ಆಪರೇಷನ್‌ ಕಮಲದ ಸುಳಿಗೆ ಸಿಲುಕಿದ್ದಾರೆಯೇ ಎಂಬ ಬಗ್ಗೆ ಒಂದು ಅಂದಾಜು ಸಹ ಶಾಸಕಾಂಗ ಪಕ್ಷದ ಸಭೆಯಲ್ಲಿ ದೊರೆಯುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಬಿಜೆಪಿಯ ಆಪರೇಷನ್‌ ಕಮಲಕ್ಕೆ ಸಿಲುಕಿರುವ ಪಕ್ಷದ ಶಾಸಕರನ್ನು ಮನವೊಲಿಸುವ ತೀವ್ರ ಪ್ರಯತ್ನ ಸಹ ನಡೆಸಲಾಗುತ್ತಿದೆ. ಜತೆಗೆ, ಮೈತ್ರಿಕೂಟದ ಶಾಸಕರ ಅಡ್ಡ ಮತದಾನಕ್ಕೆ ಬಿಜೆಪಿ ಯತ್ನಿಸುತ್ತಿರುವಂತೆಯೇ ಬಿಜೆಪಿಯ ಶಾಸಕರಿಂದಲೂ ಅಡ್ಡ ಮತದಾನ ನಡೆಸುವ ಪ್ರಯತ್ನವನ್ನು ಉಭಯ ಪಕ್ಷಗಳ ನಾಯಕರು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios