Asianet Suvarna News Asianet Suvarna News

ಜಡ್ಜ್'ಗೇ ಲಂಚ! ರೌಡಿ ನಾಗನಿಂದ ದುರ್ಬಳಕೆಯಾಯ್ತ ನ್ಯಾಯಾಂಗ ವ್ಯವಸ್ಥೆ

ಹಣದ ‘ಬ್ಲ್ಯಾಕ್‌ ಅಂಡ್‌ ವೈಟ್‌' ದಂಧೆ, ಅಪಹರಣ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ರೌಡಿಶೀಟರ್‌ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ ಅಲಿಯಾಸ್‌ ನಾಗ ಪ್ರಕರಣವೊಂದರಲ್ಲಿ ತನ್ನ ಪರವಾಗಿ ತೀರ್ಪು ನೀಡುವಂತೆ ನ್ಯಾಯಾಧೀಶರಿಗೇ ಲಂಚ ನೀಡಿದ್ದ ಎಂಬ ಪ್ರಕರಣ ಬೆಳಕಿಗೆ ಬಂದಿದೆ.

Another Shocking News Of Naga Has Been Revealed
  • Facebook
  • Twitter
  • Whatsapp

ಬೆಂಗಳೂರು(ಎ.22): ಹಣದ ‘ಬ್ಲ್ಯಾಕ್‌ ಅಂಡ್‌ ವೈಟ್‌' ದಂಧೆ, ಅಪಹರಣ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ರೌಡಿಶೀಟರ್‌ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ ಅಲಿಯಾಸ್‌ ನಾಗ ಪ್ರಕರಣವೊಂದರಲ್ಲಿ ತನ್ನ ಪರವಾಗಿ ತೀರ್ಪು ನೀಡುವಂತೆ ನ್ಯಾಯಾಧೀಶರಿಗೇ ಲಂಚ ನೀಡಿದ್ದ ಎಂಬ ಪ್ರಕರಣ ಬೆಳಕಿಗೆ ಬಂದಿದೆ.

ನ್ಯಾಯಾಲಯದಲ್ಲಿ ತನ್ನ ಪರವಾಗಿ ತೀರ್ಪು ಬಾರದ ಹಿನ್ನೆಲೆಯಲ್ಲಿ ನ್ಯಾಯಾಧೀಶರಿಗೆ ತಾನು ಕೊಟ್ಟಿರುವ ಲಂಚದ ಹಣ ವಾಪಸ್‌ ಕೊಡಿಸುವಂತೆ ಸ್ವತಃ ನಾಗ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದಿರುವ ಮಾಹಿತಿ ಕನ್ನಡಪ್ರಭ-ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ! ಅಲ್ಲದೆ, ಬೇರೆ ಪ್ರಕರಣವೊಂದರಲ್ಲಿ ತನ್ನ ಪರವಾಗಿ ಆದೇಶ ನೀಡಲು ತಹಶೀಲ್ದಾರ್‌ ಎಂ.ಸಿ.ನರಸಿಂಹಮೂರ್ತಿ ಲಂಚ ಪಡೆದಿದ್ದರು ಎಂಬುದನ್ನೂ ನಾಗ ರಿಜಿಸ್ಟ್ರಾರ್‌ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. 

ಬೆಂಗಳೂರು ಹೊರವಲಯದಲ್ಲಿರುವ ದಾಬಸ್‌ಪೇಟೆಯಲ್ಲಿ ಆರೋಪಿ ನಾಗ ಫಾರ್ಮ್ ಹೌಸ್‌ ಹೊಂದಿದ್ದಾನೆ. ಮೂಲ ಜಮೀನು ಮಾಲೀಕ ರಾಜಣ್ಣ ಎಂಬುವರನ್ನು ನಾಗ ಅಪಹರಿಸಿ ಅವರಿಂದ ಬಲವಂತವಾಗಿ ದಾಖಲೆ ಪತ್ರಗಳಿಗೆ ಸಹಿ ಮಾಡಿಸಿಕೊಂಡು ಜಮೀನನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ. ಈ ಸಂಬಂಧ ರಾಜಣ್ಣ ಕೋರ್ಟ್‌ ಮೇಟ್ಟಿಲೇರಿದ್ದರು. ಈ ವೇಳೆ ತನ್ನ ಪರ ತೀರ್ಪು ನೀಡುವಂತೆ ನಾಗ ನ್ಯಾಯಾಧೀಶರಿಗೆ ಲಂಚ ಕೊಟ್ಟಿದ್ದ. ಪ್ರಕರಣದಲ್ಲಿ ನಾಗನ ಪರವಾಗಿಯೇ ಕೆಳಹಂತದ ಕೋರ್ಟ್'ನಲ್ಲಿ ತೀರ್ಪು ಬಂದಿತ್ತು.

ಕೆಳಹಂತದ ನ್ಯಾಯಾಲದ ತೀರ್ಪು ಪ್ರಶ್ನಿಸಿ ಜಮೀನಿನ ಮೂಲ ಮಾಲೀಕ ರಾಜಣ್ಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತನ್ನನ್ನು ಅಪಹರಿಸಿ ಬಲವಂತವಾಗಿ ಸಹಿ ಮಾಡಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಲಾಗಿತ್ತು ಎಂದು ರಾಜಣ್ಣ ಪರವಾಗಿ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ವಾದ ಮನ್ನಿಸಿದ್ದ ಹೈಕೋರ್ಟ್‌ ರಾಜಣ್ಣನ ಪರವಾಗಿ ತೀರ್ಪು ನೀಡಿತ್ತು.
ಹೈಕೋರ್ಟ್‌ನಲ್ಲಿ ತನ್ನ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ತಾನು ಕೆಳಹಂತದ ನ್ಯಾಯಾಧೀಶರಿಗೆ ಕೊಟ್ಟಲಂಚದ ಹಣವನ್ನು ತನಗೆ ವಾಪಸ್‌ ಕೊಡಿಸಬೇಕು ಎಂದು ನಾಗ ಮಾ.14ರಂದು ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾನೆ.

ಇನ್ನು ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶರೊಬ್ಬರಿಗೆ ಜಾಮೀನು ನೀಡಲು ಲಂಚ ಕೊಟ್ಟಿದ್ದೆ. ನೆಲಮಂಗಲದ ತಹಶೀಲ್ದಾರ್‌ ಕೂಡ ನನ್ನಿಂದ ಲಂಚ ಪಡೆದಿದ್ದಾರೆ. ಪ್ರಕರಣವೊಂದರಲ್ಲಿ ನನ್ನ ಪರವಾಗಿ ಆದೇಶ ನೀಡಲು ತಹಶೀಲ್ದಾರ್‌ ಎಂ.ಸಿ.ನರಸಿಂಹಮೂರ್ತಿ ಲಂಚ ಪಡೆದಿದ್ದರು ಎಂದು ರಿಜಿಸ್ಟ್ರಾರ್‌ಗೆ ಬರೆದಿರುವ ಪತ್ರದಲ್ಲಿ ನಾಗ ಉಲ್ಲೇಖಿಸಿದ್ದಾನೆ. ಇನ್ನು ಹೈಕೋರ್ಟ್‌ನಲ್ಲಿ ತೀರ್ಪು ರಾಜಣ್ಣ ಪರವಾಗಿ ಬಂದಿದ್ದರೂ ಇದುವರೆಗೆ ರೌಡಿಶೀಟರ್‌ ನಾಗ ಫಾರ್ಮ ಹೌಸ್‌ ಖಾಲಿ ಮಾಡಿಲ್ಲ.

ಮಾ.18ರಂದು ಉದ್ಯಮಿ ಉಮೇಶ್‌ ಹಾಗೂ ಅವರ ಸ್ನೇಹಿತರನ್ನು ಅಪಹರಿಸಿದ್ದ ನಾಗರಾಜ, ಉದ್ಯಮಿ ಬಳಿಯಿದ್ದ ರದ್ದಾದ ಹಳೆಯ 500, 1000 ಮುಖಬೆಲೆಯ .50 ಲಕ್ಷ ಹಣ ದರೋಡೆ ಮಾಡಿದ್ದ. ಉದ್ಯಮಿ ನೀಡಿದ ದೂರಿನ ಮೇರೆಗೆ ಶ್ರೀರಾಂಪುರದಲ್ಲಿರುವ ಆರೋಪಿ ನಾಗನ ಮನೆ ಮೇಲೆ ದಾಳಿ ನಡೆಸಿದಾಗ ರದ್ದಾದ ಹಳೆಯ . 14.80 ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಈ ವೇಳೆ ಹಲವು ಭೂ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದವು.

Follow Us:
Download App:
  • android
  • ios