ಬೆಂಗಳೂರು :  ಬೆಂಗಳೂರಿನ ಆಸ್ತಿದಾರರೇ, ನೀವು ಈಗಾಗಲೇ ಬಿಬಿಎಂಪಿಗೆ ಪಾವತಿಸುತ್ತಿರುವ ಆಸ್ತಿ ತೆರಿಗೆ ಜೊತೆಗೆ ಶೀಘ್ರದಲ್ಲೇ ಹೆಚ್ಚುವರಿಯಾಗಿ ಶೇ. 2ರಷ್ಟು ಭೂ ಸಾರಿಗೆ ಉಪಕರ ಪಾವತಿಸಲು ಸಿದ್ಧರಾಗಿದೆ. 

ಸರ್ಕಾರದ ಅಧಿಸೂಚನೆಯಂತೆ ಬಿಬಿಎಂಪಿ ನಗರದ ಆಸ್ತಿದಾರರ ಮೇಲೆ ಶೇ. 2ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ಹೊರಟಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಷಯಕ್ಕೆ ಮಂಗಳವಾರ ಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಅನುಮೋದನೆ ಪಡೆಯಲು ಮುಂದಾಗಿದೆ. ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಈಗಾಗಲೇ ಬಿಬಿಎಂಪಿ ನಗರದಲ್ಲಿ ಆಸ್ತಿ ತೆರಿಗೆ ಜತೆಗೆ ಶೇ. 2 ರಷ್ಟು ವಾಹನ ತೆರಿಗೆ ವಸೂಲಿ ಮಾಡುವಂತೆ  2013ರಲ್ಲೇ ಅಧಿಸೂಚನೆ ಹೊರಡಿಸಿತ್ತು. ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಷಯವನ್ನು ಬಿಬಿಎಂಪಿ ಈಗ ಕೌನ್ಸಿಲ್ ಸಭೆಯಲ್ಲಿ ಮತ್ತೊಮ್ಮೆ ಮಂಡಿಸಿ ಅನುಮೋದನೆ ಪಡೆದು ಜಾರಿಗೊಳಿಸಲು
ಸಿದ್ಧವಾಗಿದೆ.

ಒಂದು ವೇಳೆ ಶೇ. 2 ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ಕೌನ್ಸಿಲ್ ಅನುಮೋದನೆ ದೊರೆತರೆ, ಈಗಾಗಲೇ ನಗರದ ಆಸ್ತಿದಾರರು ಬಿಬಿಎಂಪಿಗೆ ಪಾವತಿ ಮಾಡುತ್ತಿರುವ ಗ್ರಂಥಾಲಯ ಸೆಸ್, ಭಿಕ್ಷುಕರ ಸೆಸ್, ಶಿಕ್ಷಣ, ಆರೋಗ್ಯ ಸೆಸ್ ಸೇರಿದಂತೆ ನಿಗದಿತ ಪ್ರಮಾಣದ ವಿವಿಧ ಉಪಕರಗಳ ಜತೆಗೆ ಆಸ್ತಿ ತೆರಿಗೆ ಶೇ.2 ರಷ್ಟು ಭೂ ಸಾರಿಗೆ ಕರ ತೆರ ಬೇಕಾಗುತ್ತದೆ. ಈ ವರ್ಷದಿಂದಲೇ ಇದು ಜಾರಿ ಯಾಗಲಿದ್ದು. ಈಗಾಗಲೇ ಆಸ್ತಿ ತೆರಿಗೆ ವತಿಸಿರುವವರು ಬಿಬಿಎಂಪಿಯಿಂದ ಬರುವ ಪೂರಕ ಮಾಹಿತಿ ಆಧರಿಸಿ ಸಾರಿಗೆ ಉಪಕರ ಪಾವತಿಸುವುದು ಅನಿವಾರ್ಯವಾಗಲಿದೆ.

ಈ ಮಧ್ಯೆ, ಮಂಗಳವಾರ ನಡೆಯುವ ಕೌನ್ಸಿಲ್  ಸಭೆ ಅಜೆಂಡಾಗಳ ಪಟ್ಟಿಯಲ್ಲಿ ಭೂ ಸಾರಿಗೆ ಉಪಕರದ ವಿಷಯವನ್ನು ಸೇರಿಸಲಾಗಿದೆಯಾದರೂ, ಸಾರ್ವಜನಿಕ ವಿರೋಧದ ಭಯದಿಂದಾಗಿ ಈ ವಿಷಯ ಮಂಡಿಸಬೇಕೇ ಬೇಡವೇ ಎಂಬ ಜಿಗ್ನಾಸೆಯಿಂದ ಬಿಬಿಎಂಪಿ ಹೊರಬಂದಿಲ್ಲ. ಹಾಗಾಗಿ ಸೋಮವಾರ ಈ ವಿಚಾರವಾಗಿ ಮತ್ತೊಮ್ಮೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯತೆ ಇದೆ. ಈ ವೇಳೆ ಪ್ರಸಕ್ತ ವಿಷಯ ಅಜೆಂಡಾ ಪಟ್ಟಿಯಿಂದ ಹಿಂತೆಗೆದರೂ ಆಶ್ಚರ್ಯವಿಲ್ಲ ಎನ್ನುತ್ತವೆ ಪಾಲಿಕೆ ಮೂಲಗಳು.

ಏನಿದು ತಿದ್ದುಪಡಿ- ಅಧಿಸೂಚನೆ?: ರಾಜ್ಯ ಸರ್ಕಾರ 2012 - 13 ರಲ್ಲೇ ನಗರ ಪ್ರದೇಶಗಳಲ್ಲಿ ಸಾರಿಗೆ ಸೌಲಭ್ಯ ಹಾಗೂ ಮೂಲಸೌಕರ್ಯ ಹೆಚ್ಚಳ ನಿಧಿಗೆ ಹಣ ಕ್ರೋಢೀಕರಿಸುವ ಸಲುವಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ 1976 ಪ್ರಕರಣದ 103 ಕ್ಕೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯಲ್ಲಿ ಹೊಸದಾಗಿ ಪ್ರಕರಣ 103 ಸಿಯನ್ನು ಸೇರಿಸಿ ಆಸ್ತಿ ತೆರಿಗೆಯ ಮೇಲೆ ಶೇ. 2ರಷ್ಟು ನಗರ ಭೂ ಸಾರಿಗೆ ಉಪಕರ ಸಂಗ್ರಹಿಸಲು ಅಧಿಸೂಚನೆ ಹೊರಡಿಸಿತ್ತು. 

ಅದರಂತೆ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ನಗರ ಸಾರಿಗೆ ನಿಧಿ) ನಿಯಮಗಳು 2013 ಎಂದು ಹೊಸ ನಿಯಮಗಳನ್ನು ರಚಿಸಿ ಅಧಿಸೂಚನೆ ಹೊರಡಿ ಸಿದ ದಿನದಿಂದಲೇ ನಗರ ಭೂ ಸಾರಿಗೆ ನಿಧಿ ಉಪಕರ ವಿಧಿಸಿ ಜಾರಿಗೆ ತರುವಂತೆ ಸೂಚಿಸಲಾಗಿತ್ತು. ಈ ರೀತಿ ಸಂಗ್ರಹವಾದ ಹಣವನ್ನು ತ್ರೈಮಾಸಿಕ ವರದಿ ಯಲ್ಲಿ ನಗರ ಭೂ ಸಾರಿಗೆ ಇಲಾಖೆ ನಿರ್ದೇಶಕರಿಗೆ ಕಳುಹಿಸುವಂತೆ ಸೂಚಿಸಲಾಗಿತ್ತು.

ಆದರೆ, 2013 ರಲ್ಲಿ ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಒಪ್ಪಿಗೆ ಮೂಲಕ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡನೆಯಾದಾಗ ಸಭೆಯು ಇದನ್ನು ಅನುಮೋದಿಸಿದರಲಿಲ್ಲ. ನಗರದ ಆಸ್ತಿ ತೆರಿಗೆದಾರರ ಮೇಲೆ ಹೊರಯಾಗಲಿದೆ ಎಂಬ ಕಾರಣಕ್ಕೆ ಈ ಆದೇಶವನ್ನು ಹಿಂಪಡೆಯುವಂತೆ ಕೋರಿ ಸರ್ಕಾರಕ್ಕೆ ಹಿಂತಿರುಗಿಸಲಾಗಿತ್ತು. ಆದರೆ, ಸರ್ಕಾರ ಇನ್ನು ಒಪ್ಪದೆ, ಕಾಯ್ದೆಗೆ ತಿದ್ದುಪಡಿ ತಂದಿ ರುವುದನ್ನು ಮತ್ತೊಮ್ಮೆ ಬಿಬಿಎಂಪಿಗೆ ಮನವರಿಕೆ ಮಾಡಿಕೊಟ್ಟು ಕೌನ್ಸಿಲ್ ಸಭೆಯಲ್ಲಿ ಅನುಮೋದಿಸಿ ಭೂ ಸಾರಿಗೆ ಉಪಕರ ವಿಧಿಸಲು ಕ್ರಮ  ಕೈಗೊಳ್ಳುವಂತೆ ಸೂಚಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಕೌನ್ಸಿಲ್ ಸಭೆಯ ಒಪ್ಪಿಗೆ ದೊರೆಯದ ಕಾರಣಕ್ಕೆ ಬಿಬಿಎಂಪಿ ಸರ್ಕಾರದ ಆದೇಶ ಪಾಲಿಸದೆ ಮುಂದೂಡಿಕೊಂಡು ಬಂದಿದೆ.