. ಜೈಲಿನ ಭದ್ರತೆಗೆ ನಿಯೋಜಿಸಲಾಗಿರುವ ಕೈಗಾರಿಕಾ ಭದ್ರತಾ ಪಡೆಯ ಎಸ್ಐ ಗಜರಾಜ ಮಾಕನೂರ್ ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ಮಾಡುತ್ತಿದ್ದ ಎಂದು ದೂರು ನೀಡಲಾಗಿದೆ. ದೂರಿನಲ್ಲಿ ಶಶಿಕಲಾಗೆ ವಿವಿಐಪಿ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಈತ ವಹಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು(ಜು.24 ): ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ರಾಜಾತಿಥ್ಯ ನೀಡಿದ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೆಸರುಗಳನ್ನು ಬಯಲಿಗಿಡುತ್ತಿದೆ. ಜೈಲಿನ ಭದ್ರತೆಗಿದ್ದ ಎಸ್ಐ ಒಬ್ಬ ಇಡೀ ರಾಜಾತಿಥ್ಯದ ಸೂತ್ರದಾರ ಅನ್ನೋ ಮಾಹಿತಿ ಬಯಲಾಗಿದೆ. ಜೈಲಿನ ಸಿಬ್ಬಂದಿ ಈಗ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಕ್ಕೆ ಅವಕಾಶ ನೀಡಿದ ಎಲ್ಲ ಅಧಿಕಾರಿಗಳನ್ನ ಸರ್ಕಾರ ವರ್ಗಾವಣೆ ಮಾಡಿ ತನಿಖೆ ನಡೆಸುತ್ತಿದೆ. ಆದರೆ ವಿವಿಐಪಿ ಕೈದಿಗಳಿಗೆ ರಾಜಾತಿಥ್ಯ ನೀಡಿದ ಒಬ್ಬ ಅಧಿಕಾರಿ ಮಾತ್ರ ಈಗಲೂ ಜೈಲಿನಲ್ಲಿ ಆಳ್ವಿಕೆ ಮುಂದುವರಿಸಿದ್ದಾನೆ.
ಎಸ್ಐಗಜರಾಜಮಾಕನೂರ್
ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಗೆ ರಾಜಾತಿಥ್ಯ ಪ್ರಕರಣ ರಾಜ್ಯ, ರಾಷ್ಟ್ರಾದ್ಯಂತ ಸುದ್ದಿ ಮಾಡಿತ್ತು. ಆದ್ರೆ ಶಶಕಲಾ ಐಷರಾಮಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟವರು ಯಾರು? ಇದಕ್ಕೆ ಬಲವಾದ ಸಾಕ್ಷಿ ಸಿಕ್ಕಿದೆ. ಜೈಲಿನ ಭದ್ರತೆಗೆ ನಿಯೋಜಿಸಲಾಗಿರುವ ಕೈಗಾರಿಕಾ ಭದ್ರತಾ ಪಡೆಯ ಎಸ್ಐ ಗಜರಾಜ ಮಾಕನೂರ್ ಕೈದಿಗಳಿಗೆ ಐಷಾರಾಮಿ ವ್ಯವಸ್ಥೆ ಮಾಡುತ್ತಿದ್ದ ಎಂದು ದೂರು ನೀಡಲಾಗಿದೆ. ದೂರಿನಲ್ಲಿ ಶಶಿಕಲಾಗೆ ವಿವಿಐಪಿ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಈತ ವಹಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ ಸ್ಫೋಟಕ ಸತ್ಯಗಳು
* ಜೈಲಿನ ಕೈದಿಗಳಿಗೆ ಎಸ್ಐ ಗಜರಾಜ್ ಮಾಕನೂರು ಐಷಾರಾಮಿ ವ್ಯವಸ್ಥೆ
* ಶಶಿಕಲಾ ಭೇಟಿಗೆ ಬರುವವರಿಗೆ ನೇರ ಸಂದರ್ಶನಕ್ಕೆ ವ್ಯವಸ್ಥೆ
* ಜೈಲಿನ ಅವಧಿ ಮುಗಿದ ನಂತರವೂ ನೇರ ಭೇಟಿಗೆ ವ್ಯವಸ್ಥೆ
* ಜೈಲಿನ ಹೊರಗಿನಿಂದ ಶಶಿಕಲಾಗೆ ಸಕಲ ವ್ಯವಸ್ಥೆ
* ಶಶಿಕಲಾ ರೂಮ್ನಲ್ಲಿ ಎಲ್ಇಡಿ ಟಿವಿ, ಎಸಿ, ಐಷಾರಾಮಿ ಮಂಚ, ಅಡುಗೆ ಮನೆ
* ತಮಿಳುನಾಡಿನ ರಾಜಕಾರಣಿಗಳು, ಅಧಿಕಾರಿಗಳು ಸಭೆ ನಡೆಸಲು ಒಂದು ರೂಂ
* ಗೃಹ ಸಚಿವರ ಆಪ್ತ ಆಸ್ಟ್ರೇಲಿಯಾ ಪ್ರಕಾಶ್ಗೆ ಜೈಲಿಗೆ ನೇರವಾಗಿ ಪ್ರವೇಶ
* ಬ್ಲ್ಯಾಕ್ ಅಂಡ್ ವೈಟ್ ದಂಧೆ ಆರೋಪಿಗಳಾದ ಜಯಚಂದ್ರ, ಚಿಕ್ಕರಾಯಪ್ಪನಿಗೂ ಐಷಾರಾಮಿ ವ್ಯವಸ್ಥೆ
* ರಿಯಲ್ ಎಸ್ಟೇಟ್ ವಂಚಕ ಸಚಿನ್ ನಾಯ್ಕ್ಗೂ ಜೈಲಿನಲ್ಲಿ ವಿಐಪಿ ಟ್ರೀಟ್ಮೆಂಟ್
* ಎಸ್ಐಟಿಯಿಂದ ಬಂಧನಕ್ಕೊಳಗಾಗಿದ್ದ ಗಂಗಾರಾಮ್ ಬಡೇರಿಯಾಗೂ ವಿವಿಐಪಿ ಟ್ರೀಟ್ಮೆಂಟ್
* ಶಶಿಕಲಾಗೆ ರಾಜಾತಿಥ್ಯ ನೀಡಲು ದಿನಕರನ್ ಕಡೆಯಿಂದ 30-40 ನಿವೇಶನ ಪಡೆದಿದ್ದ ಎಸ್ಐ
* ಜೈಲು ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ಬಂಟನಾಗಿ ಕೆಲಸ
* ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸೈಟ್ ಪಡೆದಿದ್ದ ಎಸ್ಐ
* ಸ್ವಂತ ಊರು ರಾಣಿಬೆನ್ನೂರಿನಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸುತ್ತಿರುವ ಎಸ್ಐ
* ಬೆಂಗಳೂರಿನಲ್ಲಿ ಎರಡು ಕಾರುಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿರುವ ಗಜರಾಜ
ಹೀಗೆ ಜೈಲಿನ ಹಿಂದಿನ ಅಧೀಕ್ಷಕ ಕೃಷ್ಣಕುಮಾರ್ ಬಂಟ ಎಂದು ಹೇಳಿಕೊಳ್ಳುತ್ತಿದ್ದ ಗಜರಾಜ ಮಾಕನೂರ್ ವಿವಿಐಪಿ ಕೈದಿಗಳಿಗೆ ರಾಜಾತಿಥ್ಯ ವಹಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಎಂಬ ಮಾಹಿತಿ ದೂರಿನಲ್ಲಿ ಉಲ್ಲೇಖವಾಗಿದೆ. ಅಕ್ರಮಕ್ಕೆ ಅವಕಾಶ ನೀಡಿದ ಎಲ್ಲ ಅಧಿಕಾರಿಗಳೂ ವರ್ಗಾವಣೆಯಾಗಿದರೆ ಗಜರಾಜ ಮಾತ್ರ ಇನ್ನೂ ಜೈಲಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ದೂರು ಬಂದರೂ ಈ ಬಗ್ಗೆ ಇನ್ನೂ ಬಂದೀಖಾನೆಯ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲದೇ ಇರೋದು ಆಶ್ಚರ್ಯ ಮೂಡಿಸಿದೆ.
- ಶಶಿಶೇಖರ್,ಸುವರ್ಣ ನ್ಯೂಸ್
