ಬೆಂಗಳೂರು(ಸೆ.19): ಇಂದು ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಕರ್ನಾಟಕಕ್ಕೆ ಅಗ್ನಿ ಪರೀಕ್ಷೆ. ಇದರ ನಡುವೆಯೇ ಕರ್ನಾಟಕಕ್ಕೆ ಹೊಸದೊಂದು ಆತಂಕ ಎದುರಾಗಿದೆ. ಅದು ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಖ್ಯಸ್ಥರಿಂದ, ಅದೇನು ಆತಂಕ? ಇಲ್ಲಿದೆ ವಿವರ

ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಒಂದರ ಮೇಲೊಂದರಂತೆ ಆಘಾತ ಅನುಭವಿಸುತ್ತಿರುವ ಕರ್ನಾಟಕಕ್ಕೆ ಈಗ ಮತ್ತೊಂದು ಆತಂಕ ಎದುರಾಗಿದೆ. ‘ಇನ್ನಷ್ಟು ನೀರು ಬಿಡಿ' ಎಂದು ತಮಿಳುನಾಡು ಬೇಡಿಕೆ ಸಲ್ಲಿಸಿರುವ ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಖ್ಯಸ್ಥರಾಗಿರುವುದು ತಮಿಳುನಾಡು ಕೇಡರ್‌'ನ ಅಧಿಕಾರಿ ಶಶಿಶೇಖರ್.

ಯಾರು ಈ ಶಶಿಶೇಖರ್​? 34 ವರ್ಷ ತಮಿಳುನಾಡಿನಲ್ಲೇ ಇದ್ದ ಅಧಿಕಾರಿ

ಹೆಸರು: ಶಶಿಶೇಖರ್

ಹುದ್ದೆ : ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ

ಮೂಲ: ಬಿಹಾರದ ನಳಂದಾ

ಕೇಡರ್​ : ತಮಿಳುನಾಡು ಕೇಡರ್​ IAS

ವೃತ್ತಿ ಆರಂಭ : ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆ

1981ರಿಂದ 2015ರ ವರೆಗೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಣೆ

ಈ ಐಎಎಸ್​ ಅಧಿಕಾರಿ ಶಶಿಶೇಖರ್, ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆಗಿರುವ ಇವರು ಕಾವೇರಿ ಮೇಲುಸ್ತುವಾರಿ ಸಮಿತಿಯ ಮುಖ್ಯಸ್ಥರೂ ಹೌದು. ಮೂಲತಃ ಬಿಹಾರದ ನಳಂದಾದವರಾದ್ರೂ ತಮಿಳುನಾಡಿ ಕೇಡರ್​ನ ಅಧಿಕಾರಿ. ಇನ್ನೂ ಗಮನಹರಿಸಬೇಕಾದ ವಿಚಾರ ಅಂದ್ರೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲೇ ಇವರು ವೃತ್ತಿ ಜೀವನ ಆರಂಭಿಸಿದ್ರು. 1981ರಿಂದ 2015ರ ವರೆಗೆ ತಮಿಳುನಾಡಿನ ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇನ್ನು ಶಶಿಶೇಖರ್​ ವೃತ್ತಿ ಆರಂಭಿಸಿರುವ ಪುದುಕ್ಕೊಟ್ಟೈ, ಕಾವೇರಿ ನದಿ ಸೀಮೆಯೊಳಗಿನ ಜಿಲ್ಲೆ. ಪುದುಕ್ಕೋಟ್ಟೈ ಮುನ್ಸಿಪಾಲಿಟಿ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಆಗುವುದು ಸಹ ಕಾವೇರಿ ನದಿಯಿಂದ.

ಇನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಎಲ್ಲ ರೀತಿಯ ತಂತ್ರಗಾರಿಕೆಯನ್ನೂ ಪ್ರಯೋಗಿಸುವ ಹಿನ್ನೆಲೆ ಉಳ್ಳವರು. ಪ್ರಸ್ತುತ ಕಾವೇರಿ ಸಮಸ್ಯೆಯ ಕೀಲಿ ಕೈ ಇವರ ಕೈ ಸೇರಿದೆ. ಇಂತಹ ಅಧಿಕಾರಿಯಿಂದ ನಮಗೆ ನ್ಯಾಯ ಸಿಗುತ್ತದಾ? ನಮ್ಮ ನಾಯಕರು ಏನು​ ಹೇಳುತ್ತಾರೆ?

ನಮ್ಮ ಪ್ರಶ್ನೆಗೆ ನಾಯಕರ ಉತ್ತರಿಸುವ ಬದಲು ನಾಯಕರು ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ನಿಂತಿದ್ದಾರೆ. ಒಗ್ಗಟ್ಟು ಪ್ರದರ್ಶನ ಎಲ್ಲೂ ಕಂಡಿಲ್ಲ. ಒಂದೆಡೆ ನಮ್ಮ ನಾಯಕರಲ್ಲೇ ಒಗ್ಗಟ್ಟಿಲ್ಲ, ಇದರ ನಡುವೆಯೇ ತಮಿಳುನಾಡಿನಲ್ಲಿ 34 ವರ್ಷ ಸೇವೆ ಸಲ್ಲಿಸಿರುವ ಐಎಎಸ್​ ಅಧಿಕಾರಿ ಶಶಿಶೇಖರ್​ ಕನ್ನಡಿಗರಿಗೆ ಕಾವೇರಿ ನೀರಿನ ವಿಚಾರದಲ್ಲಿ ನ್ಯಾಯ ತಂದುಕೊಡುತ್ತಾರಾ? ಇದೇ ಸದ್ಯದ ಪ್ರಶ್ನೆ. ಇದೇ ಕಾವೇರಿ ಕೊಳ್ಳದ ಜನರ ಬಹುದೊಡ್ಡ ಆತಂಕ