ಬಿಬಿಎಂಪಿಗೆ ಸೇರಿದ ಉದ್ಯಾನವನದಲ್ಲಿ ಬಾಲಕಿಯೊಬ್ಬಳ ಮೇಲೆ ಕಬ್ಬಿಣದ ಸಲಾಕೆ ಬಿದ್ದು ಮೃತಪಟ್ಟಿರುವ ಘಟನೆ ಮಹದೇವಪುರ ಠಾಣಾ ಸರಹದ್ದಿನ ಎ. ನಾರಾಯಣಪುರ ಎಂವಿಜೆ ಲೇಔಟ್‌ನಲ್ಲಿ ಶನಿವಾರ ಸಂಜೆ ನಡೆದಿದೆ.
ಬೆಂಗಳೂರು(ಆ.13): ಬಿಬಿಎಂಪಿಗೆ ಸೇರಿದ ಉದ್ಯಾನವನದಲ್ಲಿ ಬಾಲಕಿಯೊಬ್ಬಳ ಮೇಲೆ ಕಬ್ಬಿಣದ ಸಲಾಕೆ ಬಿದ್ದು ಮೃತಪಟ್ಟಿರುವ ಘಟನೆ ಮಹದೇವಪುರ ಠಾಣಾ ಸರಹದ್ದಿನ ಎ. ನಾರಾಯಣಪುರ ಎಂವಿಜೆ ಲೇಔಟ್ನಲ್ಲಿ ಶನಿವಾರ ಸಂಜೆ ನಡೆದಿದೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಎಂವಿಜೆ ಲೇಔಟ್ ನಿವಾಸಿ ಸುಬ್ರಮಣಿ ಮತ್ತು ವಿಜಯಾ ಎಂಬುವರ ಪುತ್ರಿ ಪ್ರಿಯಾ (13) ಮೃತ ದುರ್ದೈವಿ. ಈ ಸಂಬಂಧ ಬಿಬಿಎಂಪಿ ವಿರುದ್ಧ ಮಹದೇವಪುರ ಠಾಣೆಯಲ್ಲಿ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ.
ಮಗಳು ಪ್ರಿಯಾ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರವಾದ ಕಾರಣ ಶಾಲೆಯಿಂದ ಮನೆಗೆ ಬೇಗ ಬಂದಿದ್ದು, ಇಬ್ಬರು ಸ್ನೇಹಿತರೊಂದಿಗೆ ಆಟ ಆಡಲು ಮನೆ ಸಮೀಪ ಇರುವ ಪಾರ್ಕ್ ಬಂದಿದ್ದಳು. ಪಾರ್ಕ್ನಲ್ಲಿ ಮಕ್ಕಳು ಆಟವಾಡುವ ಸಂಬಂಧ ಇಳಿಜಾರು ಬಂಡೆ ನಿರ್ಮಾಣ ಮಾಡಲು ದೊಡ್ಡದಾದ ಕಬ್ಬಿಣದ ಸಲಾಕೆಗಳನ್ನು ತಂದು ಇಡಲಾಗಿತ್ತು. ಇಳಿಜಾರು ಬಂಡೆಯನ್ನು ಇನ್ನು ಅಳವಡಿಸಿರಲಿಲ್ಲ.
ಪ್ರಿಯಾ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಂಜೆ 05.30ರ ಸುಮಾರಿಗೆ ಆಟವಾಡುತ್ತಾ ಇಳಿಜಾರು ಬಂಡೆ ಬಳಿ ಬಂದಿದ್ದಾರೆ. ಈ ವೇಳೆ ಏಕಾಏಕಿ ಬಾಲಕಿ ಮೇಲೆ ಕಬ್ಬಿಣದ ಸಲಾಕೆ ಬಿದ್ದಿದ್ದೆ. ಪರಿಣಾಮ ಪ್ರಿಯಾಳ ಮುಖ ಮತ್ತು ತಲೆಗೆ ಗಂಭೀರವಾಗಿ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಸಾರ್ವಜನಿಕರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾರ್ಕ್ನಲ್ಲಿ ಉಪಕರಣ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಭದ್ರತಾ ಸಿಬ್ಬಂದಿ ಇಳಿಜಾರುಬಂಡೆ ಬಳಿ ಹೋಗದಂತೆ ಸಾರ್ವಜನಿಕರು ಮತ್ತು ಮಕ್ಕಳಿಗೆ ಸೂಚನೆ ನೀಡಬೇಕಿತ್ತು. ಈ ಸಂಬಂಧ ಬಿಬಿಎಂಪಿ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಪೋಷಕರ ಆಕ್ರಂದನ: ಮೃತ ಬಾಲಕಿಯ ಶವವನ್ನು ಮಹದೇವಪುರದಲ್ಲಿರುವ ಕಂಪರ್ಟ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಬಾಲಕಿಯ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
