ಇದು ಎಲ್ಲಾ ಪಾಲಿಕೆ ಕಚೇರಿಗಳಲ್ಲಿ ಹಾಗೂ ಆನ್‍ಲೈನ್ ನಲ್ಲಿ ಪ್ರಕಟಗೊಂಡಿದ್ದು, ಹೆಸರು ಬಿಟ್ಟುಹೋದವರು ನೋಂದಾಯಿಸಿಕೊಳ್ಳಲು ಇನ್ನೂ ಅವಕಾಶವಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರು(ಮಾ.01): ನಗರದ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 8287 ಮತಗಟ್ಟೆಗಳಲ್ಲಿ 87,98,335 ಮತದಾರರ ಹೆಸರನ್ನು ನೋಂದಾಯಿಸಿಕೊಳ್ಳಲಾಗಿದೆ.

ಇದು ಎಲ್ಲಾ ಪಾಲಿಕೆ ಕಚೇರಿಗಳಲ್ಲಿ ಹಾಗೂ ಆನ್‍ಲೈನ್ ನಲ್ಲಿ ಪ್ರಕಟಗೊಂಡಿದ್ದು, ಹೆಸರು ಬಿಟ್ಟುಹೋದವರು ನೋಂದಾಯಿಸಿಕೊಳ್ಳಲು ಇನ್ನೂ ಅವಕಾಶವಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಕಳೆದ ಬಾರಿಗಿಂತ 500 ಮತಗಟ್ಟೆಗಳು ಈ ಬಾರಿ ಹೆಚ್ಚಾಗಿವೆ. ಇನ್ನು ಈ ಬಾರಿ ಮತದಾನದ ಸಂಧರ್ಭದಲ್ಲಿ ಇವಿಎಂ ಮೆಷಿನ್ ಜೊತೆ ವಿವಿ ಪ್ಯಾಟ್ ಮೆಷಿನ್ ಬಳಕೆ ಮಾಡಲಾಗ್ತಿದೆ ಎಂದು ತಿಳಿಸಿದರು.

ಚುನಾವಣಾ ದಿನಾಂಕ ಘೋಷಣೆ ಆದ ಕೂಡಲೇ ನಗರದಾದ್ಯಂತ ಇರುವ ಎಲ್ಲಾ ರಾಜಕೀಯ ಮುಖಂಡರ ಜಾಹಿರಾತು ಫಲಕಗಳನ್ನು ಕಿತ್ತುಹಾಕಲಾಗುವುದು. ಇಲ್ಲವಾದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಎಫ್'ಐಆರ್ ದಾಖಲಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು. ಅಲ್ಲದೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಶೇಕಡಾ 54 ಮತದಾನವಾಗಿತ್ತು, ಈ ಬಾರಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.