. ಇಂದೂ ಕೂಡ ಮತ್ತೆ ಮೂರು ಪ್ರಕರಣಗಳು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿವೆ.

ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆಯಲ್ಲಿ ಯುವತಿಯರ ಜತೆ ಅಸಭ್ಯ ವರ್ತನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಲೈಂಗಿಕ ಕಿರುಕುಳ ಪ್ರಕರಣಗಳು ಸರಣಿಯೋಪಾದಿಯಲ್ಲಿ ವರದಿಯಾಗುತ್ತಿವೆ. ಇಂದೂ ಕೂಡ ಮತ್ತೆ ಮೂರು ಪ್ರಕರಣಗಳು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿವೆ.

ಕಬ್ಬನ್ ಪಾರ್ಕ್ : ಸೆಲ್ಫಿಗೆ ಒಪ್ಪದ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವತಿ ಬೆನ್ನತ್ತಿದ ಕಾಮುಕರಿಬ್ಬರು ಬಲವಂತವಾಗಿ ಆಕೆಯ ಜತೆ ಸೆಲ್ಫಿ ತಗೆದುಕೊಳ್ಳಲು ಯತ್ನಿಸಿದ್ದಾರೆ. ಪೋಟೋಗೆ ಪೋಸ್​ ನೀಡಲು ಒಪ್ಪದ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಣಸವಾಡಿ: ಬಾಣಸವಾಡಿಯ ಮೂರನೇ ಕ್ರಾಸ್​​​ನಲ್ಲಿ ಕ್ಯಾಬ್ ಗೆ ಕಾಯುತ್ತಿದ್ದ ಯುವತಿಯನ್ನು ಕಾಮುಕರು ಕಾಡಿದ್ದಾರೆ. ಆಕೆ ಬಳಿ ಬಂದು ಮೈ ಕೈ ಮುಟ್ಟಿ ಎಳೆದಾಡಿದ್ದಾರೆ. ಈ ಸಂಬಂಧ ನೊಂದ ಯುವತಿ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರೂ ಪೊಲೀಸರು ಎನ್​ಸಿಆರ್​​ ಮಾಡಿಕೊಂಡು ಕೈತೊಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಾಣಸವಾಡಿಯಲ್ಲಿಯೇ ಮತ್ತೊಂದು ಪ್ರಕರಣ

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಇಂದು ಬೆಳಕಿಗೆ ಬಂದಿದೆ. ಜನವರಿ 4ರ ರಾತ್ರಿ 9 ಗಂಟೆಗೆ ಯುವತಿಯೊಬ್ಬಳು ಜಿಮ್ ಮುಗಿಸಿ ಮನೆಗೆ ತೆರಳುವಾಗ ಹಿಂದಿನಿಂದ ಬಂದ ಇಬ್ಬರು ಯುವಕರು ಆಕೆಯ ಟೀ ಶರ್ಟ್ ಹಿಡಿದು ಎಳೆದಾಡಿದ್ದಾರೆ. ನಂತರ ಚೀರಾಡಿದ ಯುವತಿ ಕೀಡಿಗೇಡಿಗಳಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿದ್ದಾಳೆ.

ಒಟ್ಟಿನಲ್ಲಿ ಎಲ್ಲಾ ಪ್ರಕರಣಗಳನ್ನು ನೋಡಿದರೆ ಬೆಂಗಳೂರಿನಲ್ಲಿ ಕಾಮುಕರಿಗೆ ಖಾಕಿ ಭಯಾನೇ ಇಲ್ವಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡತೊಡಗಿದೆ.