ರಾಳೇಗಣ ಸಿದ್ಧಿ[ಜ.31]: ಕೇಂದ್ರದಲ್ಲಿ ಲೋಕಪಾಲರ ನೇಮಕ ಮತ್ತು ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಕಾಯ್ದೆ ಅಂಗೀಕಾರಕ್ಕೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬುಧವಾರದಿಂದ ಆಮರಣಾಂತ ನಿರಶನ ಆರಂಭಿಸಿದ್ದಾರೆ. ತಮ್ಮ ಊರಾದ ರಾಳೆಗಣ ಸಿದ್ಧಿಯಲ್ಲಿರುವ ಪದ್ಮಾವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳು, ಯುವಕರು ಮತ್ತು ರೈತರ ಜೊತೆ ಮೆರವಣಿಗೆಯಲ್ಲಿ ತೆರಳಿದ ಅವರು ಯಾದವಬಾಬಾ ದೇವಾಲಯದ ಬಳಿ ಕುಳಿತು ಉಪವಾಸ ಪ್ರತಿಭಟನೆ ಆರಂಭಿಸಿದರು.

ಜನಲೋಕಪಾಲ್‌ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ದೆಹಲಿಯ ಜಂತರ್‌ಮಂತರ್‌ನಲ್ಲಿ ಕೈಗೊಂಡಿದ್ದ ಪ್ರತಿಭಟನೆ ವ್ಯಾಪಕ ಜನಮೆಚ್ಚುಗೆ ಗಳಿಸಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಸರ್ಕಾರಕ್ಕೆ 32 ಬಾರಿ ಪತ್ರ ಬರೆದು ಹಲವು ಬಾರಿ ನೆನಪಿಸಿದರೂ ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಅಣ್ಣ ಹಜಾರೆ ಅವರು ಮತ್ತೊಮ್ಮೆ ಉಪವಾಸ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಕಚೇರಿಯನ್ನು ಲೋಕಾಯುಕ್ತದ ವ್ಯಾಪ್ತಿಗೆ ತರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗಿಸುತ್ತೇನೆ. ಆದರೆ, ಲೋಕಾಯುಕ್ತ ಕಾಯ್ದೆಯನ್ನು ಅಂಗೀಕರಿಸಿ ಲೋಕಪಾಲರನ್ನು ನೇಮಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.