ಪುಣೆ(ಸೆ. 08): ದಿಲ್ಲಿಯಲ್ಲಿ ಅಧಿಕಾರ ಹಿಡಿಯುವಾಗ ಅರವಿಂದ್ ಕೇಜ್ರಿವಾಲ್ ಮೂಡಿಸಿದ್ದ ನಿರೀಕ್ಷೆ ಹುಸಿಯಾಗಿದೆ. ಅವರು ಅಧಿಕಾರ ಬಿಟ್ಟು ಕೆಳಗಿಳಿಯಬೇಕು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಆಗ್ರಹಿಸಿದ್ದಾರೆ. ಕೇಜ್ರಿವಾಲ್ ವೈಯಕ್ತಿಕವಾಗಿ ಒಳ್ಳೆಯವರೇ. ಆದರೆ, ಅವರ ಜೊತೆಗಿರುವವರು ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಆಮ್ ಆದ್ಮಿ ಪಕ್ಷದ ಸಚಿವರು ತಪ್ಪು ಕೆಲಸದಲ್ಲಿ ತೊಡಗಿರುವುದಕ್ಕೆ ಬಲವಾದ ಸಾಕ್ಷ್ಯ ಸಿಕ್ಕರೆ ತಾನು ಕೇಜ್ರಿವಾಲ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಆರಂಭಿಸುವುದಾಗಿ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ.

"ಕೇಜ್ರಿವಾಲ್ ಸಾಚಾತನದ ಬಗ್ಗೆ ನನಗೆ ಅನುಮಾನವಿಲ್ಲ. ಆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಇವರು ಜೊತೆ ಸೇರಿಸಿಕೊಂಡ ಜನರಿಂದ ಇವರ ಘನತೆಗೆ ಕುಂದು ಬಂದಿದೆ. ಜನರಿಗೆ ಇವರ ಬಗ್ಗೆ ಭ್ರಮನಿರಸನವಾಗಿದೆ. ಇವರು ಜನರ ವಿಶ್ವಾಸ ಮರಳಿ ಪಡೆದು ದೇಶ ಸೇವೆ ಮಾಡಬೇಕೆಂದಿದ್ದರೆ, ಅಧಿಕಾರವನ್ನು ತ್ಯಜಿಸಬೇಕು" ಎಂದು ಅಣ್ಣಾ ಹಜಾರೆ ಸಲಹೆ ನೀಡಿದ್ದಾರೆ.

"ಕೇಜ್ರಿವಾಲ್ ಅವರ ಆಪ್ ಪಕ್ಷವು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಪಕ್ಷದಲ್ಲಿ ಈಗ ನಡೆಯುತ್ತಿರುವ ಬೆಳವಣಿಗೆಗಳು ಮತದಾರರ ಮನಸಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಜನರ ನಂಬಿಕೆ ಗಳಿಸುವಂಥ ಕೆಲಸ ಮಾಡಬೇಜು" ಎಂದು ಅಣ್ಣಾ ಅಭಿಪ್ರಾಯಪಟ್ಟಿದ್ದಾರೆ.

ಪಂಜಾಬ್ ಚುನಾವಣೆಯಲ್ಲಿ ಆಪ್ ಪಕ್ಷದ ಟಿಕೆಟ್ ನೀಡಿಕೆ ವಿಷಯದಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ವರದಿಯನ್ನು ಪ್ರಸ್ತಾಪಿಸಿದ ಅಣ್ಣಾ ಹಜಾರೆ, ಇದೊಂದು ದುರದೃಷ್ಟಕರ ಬೆಳವಣಿಗೆ ಎಂದು ವಿಷಾದಿಸಿದ್ದಾರೆ. ಒಳ್ಳೆಯ ವ್ಯಕ್ತಿತ್ವದ ಕೇಜ್ರಿವಾಲ್ ಅಧಿಕಾರಕ್ಕೆ ಬಂದಾಗ ಏನಾದರೂ ಒಳ್ಳೆಯದಾಗಬಹುದೆಂದು ನಿರೀಕ್ಷಿಸಿದ್ದೆ. ಆದರೆ, ಆಮ್ ಆದ್ಮಿಗೂ ಬೇರೆ ಪಕ್ಷಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಾಜಿ ಆಪ್ ಸಚಿವ ಸಂದೀಪ್ ಕುಮಾರ್ ಅವರು ಮಹಿಳೆಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಸಂದೀಪ್ ಕುಮಾರ್ ಅವರನ್ನ ಮಂತ್ರಿಪಟ್ಟದಿಂದಷ್ಟೇ ಅಲ್ಲ ಪಕ್ಷದಿಂದಲೂ ಆಪ್ ಉಚ್ಛಾಟಿಸಿತ್ತು.