ಅಂಬಾನಿ ನೇತೃತ್ವದ ರಿಲಾಯನ್ಸ್ ಇದೀಗ ಕಾಂಗ್ರೆಸ್ ಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಜವಾಬ್ದಾರಿಯಿಂದ ಮಾತನಾಡಿ ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಿ ಎಂದು ಹೇಳಿದೆ. 

ನವದೆಹಲಿ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ದೊಡ್ಡ ಹಗರಣ ನಡೆದಿದೆ. ಇದರಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಭಾಗಿಯಾಗಿದೆ ಎಂದು ದೂರುತ್ತಿರುವ ಕಾಂಗ್ರೆಸ್‌ ವಿರುದ್ಧ ಅನಿಲ್‌ ಅಂಬಾನಿ ಒಡೆತನದ ಕಂಪನಿಗಳು ತಿರುಗಿಬಿದ್ದಿವೆ. ‘ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಿ. ಇಲ್ಲದಿದ್ದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಿರುವಂತೆ’ ಕಾಂಗ್ರೆಸ್‌ನ ನಾಯಕರಿಗೆ ಉದ್ಯಮಿ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಸಂಸ್ಥೆ ಎಚ್ಚರಿಕೆ ನೋಟಿಸ್‌ ರವಾನಿಸಿದೆ.

ಈ ಬಗ್ಗೆ ಬುಧವಾರ ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೇರ್‌ಗಿಲ್‌ಗೆ ನೋಟಿಸ್‌ ರವಾನಿಸಿರುವ ಅಂಬಾನಿ ನೇತೃತ್ವದ ರಿಲಯನ್ಸ್‌ ಇನ್‌ಫ್ರಾಸ್ಟ್ರಕ್ಚರ್‌, ರಿಲಯನ್ಸ್‌ ಡಿಫೆನ್ಸ್‌ ಹಾಗೂ ರಿಲಯನ್ಸ್‌ ಏರೋಸ್ಟ್ರಕ್ಚರ್‌ ಸಂಸ್ಥೆ, ‘ರಾಜಕೀಯ ನಾಯಕರಿಗೆ ಇರುವ ವಾಕ್‌ ಸ್ವಾತಂತ್ರ್ಯವು, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಯಾರೊಬ್ಬರ ವಿರುದ್ಧ ಏನು ಬೇಕಾದರೂ ಹೊಣೆಗೇಡಿತನದಿಂದ ಹೇಳಿಕೆ ನೀಡಲು ದೊರೆತಿರುವ ಪರವಾನಗಿಯಲ್ಲ,’ ಎಂದು ಕಾಂಗ್ರೆಸ್‌ ನಾಯಕರಿಗೆ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದೆ.

ಆದರೆ, ಇದಕ್ಕೆ ಬುಧವಾರ ಟ್ವೀಟ್‌ ಮೂಲಕ ಉತ್ತರಿಸಿರುವ ಕಾಂಗ್ರೆಸ್‌ ನಾಯಕ ಜೈವೀರ್‌ ಶೇರ್‌ಗಿಲ್‌, ‘ನಾನೋರ್ವ ಕಾಂಗ್ರೆಸ್‌ ಸೇನಾನಿ. ಇಂಥ ಬೆದರಿಕೆಗಳಿಗೆಲ್ಲ ಮಣಿಯುವ ಪ್ರಶ್ನೆಯೇ ಇಲ್ಲ. ದೇಶದ ತೆರಿಗೆದಾರನಾದ ನಾನು ಸರ್ಕಾರ ಏಕೆ 42 ಸಾವಿರ ಕೋಟಿ ರು. ಹೆಚ್ಚು ಹಣ ನೀಡಿತು ಎಂಬುದನ್ನು ತಿಳಿಯುವ ಅಧಿಕಾರ ನನಗಿದೆ,’ ಎಂದಿದ್ದಾರೆ.