ನವದೆಹಲಿ[ಮಾ.13]: ಹೋಳಿ ಹಿನ್ನೆಲೆಯಲ್ಲಿ ಸರ್ಫ್ ಎಕ್ಸೆಲ್ ಡಿಟರ್ಜಂಟ್ ಇತ್ತೀಚೆಗೆ ಹಿಂದು ಬಾಲಕಿ ಮುಸ್ಲಿಂ ಬಾಲಕನ ಜತೆ ಹೋಳಿ ಆಡುವ ಜಾಹೀರಾತು ಪ್ರಸಾರ ಮಾಡಿತ್ತು. ಇದಕ್ಕೆ ಸಮಾಜದ ಒಂದು ವರ್ಗ ವಿರೋಧ ವ್ಯಕ್ತಪಡಿಸಿ, ‘ಸರ್ಫ್ ಎಕ್ಸೆಲ್ ಬಳಕೆ ಬಿಡಿ’ ಎಂಬ ಆಂದೋಲನ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿತ್ತು. ವಿಚಿತ್ರವೆಂದರೆ ಈಗ ಸರ್ಫ್ ಎಕ್ಸೆಲ್ ಬಿಸಿ ‘ಮೈಕ್ರೋ ಸಾಫ್ಟ್ ಎಕ್ಸೆಲ್’ಗೂ ಮುಟ್ಟಿದೆ.

‘ಎಕ್ಸೆಲ್’ ಎಂಬ ಹೆಸರು ಬಿಟ್ಟರೆ ಸರ್ಫ್ ಎಕ್ಸೆಲ್‌ಗೂ ಮೈಕ್ರೋಸಾಫ್ಟ್ ಎಕ್ಸೆಲ್‌ಗೂ ಸಂಬಂಧವಿಲ್ಲ. ಆದರೆ ಸರ್ಫ್ ಎಕ್ಸೆಲ್‌ಗೂ ಮೈಕ್ರೋಸಾಫ್ಟ್ ಎಕ್ಸೆಲ್‌ಗೂ ಸಂಬಂಧವಿದೆ ಎಂದು ತಿಳಿದ ಅನೇಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮೈಕ್ರೋಸಾಫ್ಟ್ ಎಕ್ಸೆಲ್‌ಗೆ ‘ಒನ್ -ಸ್ಟಾರ್’ ಕಳಪೆ ಶ್ರೇಯಾಂಕ ನೀಡುತ್ತಿದ್ದಾರೆ. ಮೈಕ್ರೋಸಾಫ್ಟ್ ಎಕ್ಸೆಲ್ ‘ಹಿಂದೂ ವಿರೋಧಿ’. ‘ಗೋ ಬ್ಯಾಕ್ ಮೈಕ್ರೋಸಾಫ್ಟ್ ಎಕ್ಸೆಲ್’ ಎನ್ನುತ್ತಿದ್ದಾರೆ.