ಪಾಟ್ನಾ(ಜೂ.02): ಕೇಂದ್ರ ಸಚಿವ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಯುಗೆ ಸೂಕ್ತ ಸ್ಥಾನಮಾನ ನೀಡದ ಬಿಜೆಪಿ ವಿರುದ್ಧ, ಬಿಹಾರ ಸಿಎಂ ನಿತೀಶ್ ಕುಮಾರ್ ಸೇಡು ತೀರಿಸಿಕೊಂಡಿದ್ದಾರೆ.

ಈಗಾಗಲೇ ಕೇಂದ್ರದಲ್ಲಿ ಎನ್‌ಡಿಎ ಭಾಗವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜೆಡಿಯು, ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತನ್ನ 8 ಶಾಸಕರಿಗೆ ಸಚಿವ ಸ್ಥಾನ ನೀಡಿ ಬಿಜೆಪಿಗೆ ಕೇವಲ 1 ಸ್ಥಾನ ನೀಡಿದೆ.

ಮೋದಿ 2.0 ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದು ಸ್ಥಾನ ನೀಡಲಾಗಿದ್ದು, ಇದಕ್ಕೆ ಮುಯ್ಯಿ ತೀರಿಸಿಕೊಂಡಿರುವ ನಿತೀಶ್ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಗೆ ಕೇವಲ ಒಂದು ಸ್ಥಾನ ಬಿಟ್ಟು ಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಬಿಜೆಪಿ ಸದ್ಯ ಒಂದು ಸ್ಥಾನವನ್ನು ಭರ್ತಿ ಮಾಡುವ ಇರಾದೆ ಹೊಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತಲಾ 17 ಕ್ಷೇತ್ರಗಳನ್ನು ಹಂಚಿಕೊಂಡಿದ್ದ ಬಿಜೆಪಿ-ಜೆಡಿಯು, 20-20 ಸೀಟು ಹಂಚಿಕೆ ಮಾದರಿಯಲ್ಲಿ ಚುನಾವಣೆ ಎದುರಿಸಿತ್ತು. ಸ್ಪರ್ಧಿಸಿದ್ದ 17 ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಜೆಡಿಯು ಜಯಗಳಿಸಿದ್ದರೆ, ಎಲ್ಲಾ 17 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು.

ಆದರೆ ಕೇಂದ್ರ ಸಂಪುಟದಲ್ಲಿ ಜೆಡಿಯುಗೆ ಕೇವಲ ಒಂದು ಸ್ಥಾನ ನೀಡುವ ಮೂಲಕ ಪ್ರಧಾನಿ ಮೋದಿ ಬಿಹಾರ ಸಿಎಂ ನಿತೀಶ್ ಕುಮಾರ್ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಪಕ್ಷ ಗೆದ್ದ ಸಂಸದರ ಸಂಖ್ಯೆಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ದಿಷ್ಟ ಭಾಗವನ್ನು ನೀಡಬೇಕೆಂದು ನಿತೀಶ್ ಕುಮಾರ್ ಒತ್ತಾಯಿಸಿದ್ದರು.