ಕಲಬುರಗಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಕೊಲೆಯನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಬಣ್ಣಿಸಿದ್ದಾರೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಮೂರು ರಾಜಕೀಯ ಕೊಲೆಗಳಾಗಿವೆ ಎಂದು ಹೇಳಿರುವ ಬಿಎಸ್ವೈ, ಹರೀಶ್ ಕೊಲೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು(ಜೂನ್ 01): ಆನೇಕಲ್'ನಲ್ಲಿ ಬಿಜೆಪಿ ಮುಖಂಡ ಹರೀಶ್ ಅವರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಹೊಸೂರು ರಸ್ತೆಯ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದ ಗೇಟ್'ನಲ್ಲಿ ಈ ಕಗ್ಗೊಲೆಯಾಗಿದೆ. ಆನೇಕಲ್ ತಾಲೂಕು ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಹರೀಶ್ ಅವರನ್ನು ದುಷ್ಕರ್ಮಿಗಳು ಡ್ಯಾಗರ್'ನಿಂದ ಚುಚ್ಚಿಚುಚ್ಚಿ ದಾರುಣವಾಗಿ ಹತ್ಯೆಗೈದಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿ ಡ್ಯಾಗರ್'ನಿಂದ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಿದ್ದಾರೆ.
ಅದೇ ಗ್ರಾಮದ ರಾಜು, ಸಂತೋಷ್ ಮತ್ತು ಸಂದೀಪ್ ಈ ಕೃತ್ಯ ಎಸಗಿದ್ದಾರೆಂದು ಕೆಲ ಸ್ಥಳೀಯರು ಅನುಮಾನಿಸಿದ್ದಾರೆ. ಕೆರೆಯಲ್ಲಿ ಮೀನು ಹಿಡಿಯುವ ವಿಚಾರವಾಗಿ ರಾಜು ಮತ್ತು ಸಂಗಡಿಗರ ವಿರುದ್ಧ ಹರೀಶ್ ಜಗಳವಾಡಿಕೊಂಡಿದ್ದ ವಿಷಯ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಹರೀಶ್'ನ ಕೊಲೆಯಾಗಿದೆ. ಅದಾದ ಬಳಿಕ, ಶಂಕಿತ ಹಂತಕರ ಮನೆಗಳ ಮೇಲೆ ಹರೀಶ್ ಸ್ನೇಹಿತರಿಂದ ಕಲ್ಲು ತೂರಾಟವೂ ಆಗಿದೆ.
ಆದರೆ, ಇದು ವೈಯಕ್ತಿಕ ಧ್ವೇಷದಿಂದ ನಡೆದ ಕೊಲೆಯಲ್ಲ. ಬದಲಾಗಿ ಪ್ರದೇಶದಲ್ಲಿ ಪ್ರಭಾವಿಯಾಗಿ ಬೆಳೆಯುತ್ತಿರುವ ಬಿಜೆಪಿಯ ಮುಖಂಡರ ಆತ್ಮವಿಶ್ವಾಸವನ್ನು ಕುಗ್ಗಿಸಲು ನಡೆದ ಕಗ್ಗೊಲೆಯಾಗಿದೆ. ಇದೊಂದು ರಾಜಕೀಯ ಪ್ರೇರಿತ ಕೊಲೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸುತ್ತಿದ್ದಾರೆ.
ಎಸ್ಪಿ ಅಮಿತ್ ಸಿಂಗ್, ಡಿವೈಎಸ್ಪಿ ಎಸ್.ಕೆ.ಉಮೇಶ್ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಾಜಿ ಸಚಿವ ಎ.ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸ್ಥಳಕ್ಕೆ ಧಾವಿಸಿದ್ದಾರೆ.
ತನಿಖೆಗೆ ಆಗ್ರಹ:
ಕಲಬುರಗಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಕೊಲೆಯನ್ನು ರಾಜಕೀಯ ಪ್ರೇರಿತ ಹತ್ಯೆ ಎಂದು ಬಣ್ಣಿಸಿದ್ದಾರೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಮೂರು ರಾಜಕೀಯ ಕೊಲೆಗಳಾಗಿವೆ ಎಂದು ಹೇಳಿರುವ ಬಿಎಸ್ವೈ, ಹರೀಶ್ ಕೊಲೆ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಸಂಸದೆ ಶೋಭಾ ಕರಂದ್ಲಾಜೆಯವರು ಕೇರಳದ ಕೊಲೆ ಪಾತಕ ರಾಜಕಾರಣ ಕರ್ನಾಟಕಕ್ಕೂ ಕಾಲಿಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರೇ ಟಾರ್ಗೆಟ್ ಆಗುತ್ತಿದ್ದಾರೆ ಎಂದು ವಿಷಾದಿಸಿರುವ ಶೋಭಾ, ಈ ಪ್ರಕರಣದ ತನಿಖೆಯ ಹೊಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
