2ಕ್ಕಿಂತ ಹೆಚ್ಚು ಮಕ್ಕಳ ಹಡೆದರೆ ಪ್ರೋತ್ಸಾಹಧನಕ್ಕೆ ಚಿಂತನೆ| ಕೇಂದ್ರದಿಂದ ಹೆಚ್ಚು ಅನುದಾನ ಪಡೆಯಲು ಹೆಚ್ಚು ಜನಸಂಖ್ಯೆ ಅಗತ್ಯ| ಆಂಧ್ರಪ್ರದೇಶ ಜನತೆಗೆ ಕರೆ ನೀಡಿದ ಸಿಎಂ
ಅಮರಾವತಿ[ಡಿ.30]: ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಶೇ.1.6ರಷ್ಟುಪ್ರಮಾಣ ಇಳಿಕೆಯಾಗಿರುವುದಕ್ಕೆ ಆತಂಕಕ್ಕೀಡಾಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ‘ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಪೋಷಕರಿಗೆ ಪ್ರೋತ್ಸಾಹ ಧನ’ ನೀಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಯುವಕರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಈ ಕ್ರಮಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧೆಗೆ ನಿಷೇಧ ಇರುವ ನಿಯಮವನ್ನು ರದ್ದು ಮಾಡುವುದಾಗಿಯೂ ಅವರು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅನುದಾನ ಸಿಗುವುದಕ್ಕೆ ಜನಸಂಖ್ಯೆಯೇ ಮಾನದಂಡ. ಹೀಗಾಗಿ, 15ನೇ ಹಣಕಾಸು ಆಯೋಗದಲ್ಲಿ ಕಡಿಮೆ ಜನಸಂಖ್ಯೆ ಇರುವ ಕಾರಣಕ್ಕೆ ಹೆಚ್ಚಿನ ಲಾಭಾಂಶ ದೊರೆಯದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ಈ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ.
ಈ ಬಗ್ಗೆ ಇತ್ತೀಚೆಗೆ ಮಾತನಾಡಿದ ಸಿಎಂ ಚಂದ್ರಬಾಬು ನಾಯ್ಡು ಅವರು, ‘ಕಳೆದ 10 ವರ್ಷಗಳಲ್ಲಿ ರಾಜ್ಯದ ಜನಸಂಖ್ಯೆ ಶೇ.1.6ರಷ್ಟುಇಳಿಕೆಯಾಗಿದೆ. ಜನಸಂಖ್ಯಾ ಅಸಮಾತೋಲನವನ್ನು ಸರಿಪಡಿಸುವುದಕ್ಕೆ ಇದು ಸುಸಂದರ್ಭವಾಗಿದೆ. ಇಲ್ಲದಿದ್ದರೆ, ಮುಂದಿನ ಎರಡು ದಶಕಗಳಲ್ಲಿ ದುಡಿಯುವವರ ಸಂಖ್ಯೆ ಇಳಿಮುಖವಾಗಿ, ಕುಳಿತು ತಿನ್ನುವವರ(ವಯೋವೃದ್ಧರು) ಸಂಖ್ಯೆ ಹೆಚ್ಚುವ ಭೀತಿಯಿದೆ’ ಎಂದು ಹೇಳಿದ್ದಾರೆ.
