ಹೈದರಾಬಾದ್(ಮೇ.18): ಸಚಿವರ ಗತ್ತು ಗೈರತ್ತು ಕಾಣದವರು ಯಾರಿದ್ದಾರೆ ಹೇಳಿ?. ಅಧಿಕಾರದ ಮದವೇರಿದವರಂತೆ ವರ್ತಿಸುವ ಸಚಿವರುಗಳಿಗೆ ಈ ದೇಶದಲ್ಲಿ ಕೊರತೆ ಏನಿಲ್ಲ. ಆದರೆ ಸಚಿವರುಗಳ ಪತ್ನಿಯರು ತೋರುವ ದರ್ಪ ಸಾರ್ವಜನಿಕರ ಗಮನಕ್ಕೆ ಬರುವುದು ಅಪರೂಪ.

ಅದರಂತೆ ಹೈದರಾಬಾದ್-ಗುಂಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ 56 ರೂ. ಟೋಲ್ ದರಕ್ಕಾಗಿ ಸಚಿರೊಬ್ಬರ ಪತ್ನಿ ರಂಪಾಟ ಮಾಡಿದ ಘಟನೆ ನಡೆದಿದೆ.

ಇಲ್ಲಿನ ಮದುಗಲ್ ಪಲ್ಲಿ ಸಮೀಪದ ಟೋಲ್ ಪ್ಲಾಜಾ ಬಳಿ ಆಂಧ್ರಪ್ರದೇಶದ ನಾಗರಿಕ ಸರಬರಾಜು ಸಚಿವ ಪ್ರತಿಪತಿ ಪುಲ್ಲಾರಾವ್ ಪತ್ನಿ ಪಿ ವೆಂಕಟಕುಮಾರಿ, ಟೋಲ್ ದರ ಕೇಳಿದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ಟೋಲ್ ಫೀ ಕೇಳಿದ ಸಿಬ್ಬಂದಿ ಮೇಲೆ ಹರಿಹಾಯ್ದ ಪಿ. ವೆಂಕಟಕುಮಾರಿ, ಸಚಿವರ ಪತ್ನಿ ಕಾರು ತಡೆಯಲು ಎಷ್ಟು ಧೈರ್ಯ ಎಂದು ಕೂಗಾಡಿ ಕೆಲಹೊತ್ತು ಟ್ರಾಫಿಕ್ ಜಾಮ್‌ಗೆ ಕಾರಣರಾದರು. 

ಆದರೆ ಯಾವುದೇ ಕಾರಣಕ್ಕೂ ಟೋಲ್ ದರ ಕಟ್ಟದೇ ವಾಹನ ಮುಂದೆ ಬಿಡುವುದಿಲ್ಲ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ ಬಳಿಕ, ಅನಿವಾರ್ಯವಾಗಿ ಟೋಲ್ ದರ ಕಟ್ಟಿ ವೆಂಕಟಕುಮಾರಿ ಮುನ್ನಡೆದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.