ಜನಪ್ರತಿನಿಧಿಗಳ (ಸಂಸದರು, ಶಾಸಕರ) ನಾಲಿಗೆ ಕತ್ತರಿಸುತ್ತೇನೆಂದು ಹೇಳುವ ಮೂಲಕ ಆಂಧ್ರ ಪ್ರದೇಶದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.  

ಅಮರಾವತಿ, [ಸೆ.23]: ಪೊಲೀಸರ ಆತ್ಮಸ್ಥೈರ್ಯಕ್ಕೆ ಧಕ್ಕೆಯುಂಟು ಮಾಡುವ ಮಾತುಗಳನ್ನಾಡಿದರೆ ಜನಪ್ರತಿನಿಧಿಗಳ (ಸಂಸದರು, ಶಾಸಕರ) ನಾಲಿಗೆ ಕತ್ತರಿಸುವುದಾಗಿ ಹೇಳುವ ಮೂಲಕ ಆಂಧ್ರ ಪ್ರದೇಶದ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. 

ಟಿಡಿಪಿ ಸಂಸದ ದಿವಾಕರ್‌ ರೆಡ್ಡಿ ಅವರನ್ನು ಗುರಿಯಾಗಿಸಿ ಅನಂತಪುರಮು ಜಿಲ್ಲೆಯ ಇನ್‌ಸ್ಪೆಕ್ಟರ್‌ ಮಾಧವ್‌ ಕದಿರಿ ಎಂಬವರು ಪತ್ರಿಕಾಗೋಷ್ಟಿಯೊಂದರಲ್ಲಿ ಈ ಎಚ್ಚರಿಕೆ ನೀಡಿದ್ದಾರೆ.

‘ನಾವು ಇಲ್ಲಿ ವರೆಗೆ ತಾಳ್ಮೆ ಕಾಪಾಡಿಕೊಂಡು ಬಂದಿದ್ದೇವೆ. ಇನ್ನುಮುಂದೆ ಯಾರಾದರೂ ತಮ್ಮ ವ್ಯಾಪ್ತಿಮೀರಿ ಪೊಲೀಸರ ಬಗ್ಗೆ ಮಾತನಾಡಿದರೆ ನಾವು ಸಹಿಸುವುದಿಲ್ಲ. ನಾವು ಅವರ ನಾಲಿಗೆ ಕತ್ತರಿಸಲಿದ್ದೇವೆ. ಎಚ್ಚರಿಕೆಯಿರಲಿ’ಎಂದು ಮಾಧವ್‌ ಹೇಳಿದ್ದಾರೆ.

ಅದಕ್ಕೆ ತಿರುಗೇಟು ನೀಡಿರುವ ಸಂಸದ ಜೆ.ಸಿ. ದಿವಾಕರ್‌ ರೆಡ್ಡಿ, ನಾಲಿಗೆ ಕತ್ತರಿಸಿಕೊಳ್ಳಲು ಎಲ್ಲಿಗೆ ಬರಬೇಕು ಹೇಳಿ ಎಂದು ತಿಳಿಸಿದ್ದಾರೆ. ಅಲ್ಲದೆ, ಅವರು ಇನ್‌ಸ್ಪೆಕ್ಟರ್‌ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ. 

ತಾಡಪತ್ರಿ ಗ್ರಾಮದಲ್ಲಿ ಸಂಭವಿಸಿದ ಗುಂಪು ಘರ್ಷಣೆ ನಿಭಾಯಿಸದೇ ಪೊಲೀಸರು ನಪುಂಸಕರ ರೀತಿ ಓಡಿದರು ಎಂದು ರೆಡ್ಡಿ ಹೇಳಿದ್ದರಿಂದ ಇನ್‌ಸ್ಪೆಕ್ಟರ್‌ ಗರಂ ಆಗಿದ್ದರು.