Asianet Suvarna News Asianet Suvarna News

ಮುಖ್ಯಮಂತ್ರಿ ವಿರುದ್ಧ ಅನಂತ್ ಕುಮಾರ್ ಟೀಕಾ ಪ್ರಹಾರ

ತುರ್ತು ಪರಿಸ್ಥಿತಿಯನ್ನು ದೇಶದ 2 ನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲಾಗಿದ್ದು, ಇದರ ವಿರುದ್ಧ ಧ್ವನಿ ಎತ್ತಿದ್ದ ಜಯಪ್ರಕಾಶ್ ನಾರಾಯಣ್ ಆಂದೋಲನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಕಿಡಿಕಾರಿದ್ದಾರೆ.
Ananth Kumar Swipe CM Siddharamaih
  • Facebook
  • Twitter
  • Whatsapp
ಬೆಂಗಳೂರು (ಜೂ.26): ತುರ್ತು ಪರಿಸ್ಥಿತಿಯನ್ನು ದೇಶದ 2 ನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲಾಗಿದ್ದು, ಇದರ ವಿರುದ್ಧ ಧ್ವನಿ ಎತ್ತಿದ್ದ ಜಯಪ್ರಕಾಶ್ ನಾರಾಯಣ್ ಆಂದೋಲನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ಆಶಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಕಿಡಿಕಾರಿದ್ದಾರೆ.
 
ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ ತುರ್ತು ಪರಿಸ್ಥಿತಿಯ ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವಿರೋಧಿಯಾಗಿದ್ದ ಕಾಂಗ್ರೆಸ್ ವಿರುದ್ಧ ಜೆಪಿ ಆಂದೋಲನದಲ್ಲಿ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು. ಆದರೆ, ಇದೀಗ ಅವರು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಎಲ್ಲ ಸಿದ್ಧಾಂತಗಳನ್ನು ಬದಿಗೊತ್ತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಡಿಯಾಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ದೇಶದ 2 ನೇ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲ್ಪಡುವ ತುರ್ತು ಪರಿಸ್ಥಿತಿಯ ವಿರುದ್ಧ ಜಯಪ್ರಕಾಶ್ ನಾರಾಯಣ್ ಅವರು ಆಂದೋಲನ ನಡೆಸಿದ್ದರು. ಈ ಆಂದೋಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು, ಜೆಪಿ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಂತಹ ಢೋಂಗಿ, ಎಡಬಿಡಂಗಿ ರಾಜಕಾರಣಿ ಮತ್ತೊಬ್ಬರಿಲ್ಲ ಎಂದು ಟೀಕಿಸಿದರು.  ಕಾಂಗ್ರೆಸ್ ಪಕ್ಷದ ಸಂಸ್ಕೃತಿಗೆ ತಕ್ಕಂತೆ ಜನ ವಿರೋಧಿ ರಾಜಕಾರಣ ನಡೆಸುತ್ತಿದ್ದಾರೆ. ಪ್ರಜಾತಂತ್ರದ ಹಕ್ಕುಗಳನ್ನು ರದ್ದುಪಡಿಸಿದ್ದ ಕಾಂಗ್ರೆಸ್‌ನ ನಡೆ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ವಂಶರಾಜಕಾರಣ, ಸರ್ವಾಧಿಕಾರಿ ಧೋರಣೆಯು ಕಾಂಗ್ರೆಸ್ ಪಕ್ಷದ್ದಾಗಿದೆ. ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಜಾರಿ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಲಾಯಿತು. ತುರ್ತು ಪರಿಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಿದ ಜೆಪಿ ಆಂದೋಲನದಲ್ಲಿ ಆರ್‌ಎಸ್‌ಎಸ್‌ನ ಮುಖಂಡರು, ಆಗ ಜನಸಂಘವಾಗಿದ್ದು, ಪ್ರಸ್ತುತ ಬಿಜೆಪಿ ಮುಖಂಡರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಜೆಪಿ ಆಂದೋಲನವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
 
ಕಾಂಗ್ರೆಸ್ ಮುಕ್ತವಾಗಲಿ:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಉಸಿರು ಕಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ದಬ್ಬಾಳಿಕೆ, ದೌರ್ಜನ್ಯ, ಸರ್ವಾಧಿಕಾರ ಮೆರೆದಿತ್ತು. ಜನರ ಸ್ವತಂತ್ರ ಕಿತ್ತುಕೊಂಡಿದ್ದ ಕಾಂಗ್ರೆಸನ್ನು ದೇಶ ಮತ್ತು ರಾಜ್ಯದಲ್ಲಿ ಹುಡುಕಿದರೂ ಸಿಗಬಾರದು. ದೇಶ ಮತ್ತು ರಾಜ್ಯವನ್ನು ಕಾಂಗ್ರೆಸ್ ಮುಕ್ತವಾಗಿಸಬೇಕು. ಲೋಕಸಭೆಯಲ್ಲಿ ಹುಡಿಕಿದರೂ ಕಾಂಗ್ರೆಸ್‌ನವರು ಸಿಗಬಾರದು, ಅಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. ತುರ್ತು ಪರಿಸ್ಥಿತಿಯಲ್ಲಿ ಹೋರಾಟ ನಡೆಸಿದ ಜಯಪ್ರಕಾಶ್ ನಾರಾಯಣ್ ಅವರನ್ನು ಜೈಲಿಗೆ ಹಾಕಿ ಕಾಂಗ್ರೆಸ್ಸಿಗರು ಜೀವಂತವಾಗಿ ಕೊಂದರು. ಜೆಪಿ ಆಂದೋಲನದಲ್ಲಿ ಆರ್‌ಎಸ್‌ಎಸ್‌ನ ಸ್ವಯಂ ಸೇವರು ಭೂಗತರಾಗಿ ಕಾರ್ಯ ನಿರ್ವಹಿಸಿ ದೇಶವನ್ನು ತುರ್ತು ಪರಿಸ್ಥಿತಿಯಿಂದ ಮುಕ್ತಗೊಳಿಸಿದ ಹೋರಾಟದ ನೆನಪುಗಳನ್ನು ಇದೇ ವೇಳೆ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಇತರರು ಉಪಸ್ಥಿತರಿದ್ದರು.

 

Follow Us:
Download App:
  • android
  • ios