ಮಂಗಳೂರು[ಜೂ 19]  ಬಂಟ್ವಾಳದ ಕೃಷಿಕ ಗಣಪತಿ ಭಟ್‌ ಅವರು ಆವಿಷ್ಕರಿಸಿರುವ ಅಡಿಕೆ ಮರ ಏರುವ ಬೈಕ್ ಯಂತ್ರ ಭಾರೀ ಸುದ್ದಿ ಮಾಡುತ್ತಿದೆ. ರಾಷ್ಟ್ರಮಟ್ಟದಲ್ಲೂ ಗಣಪತಿ ಭಟ್ ಅವರ ಬೈಕ್ ಯಂತ್ರ ಗಮನ ಸೆಳೆದಿದೆ. ಗಣಪತಿ ಭಟ್ ಅವರ ಅಡಿಕೆ ಮರ ಏರುವ ಬೈಕ್ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ ಅವರನ್ನು ಆಕರ್ಷಿಸಿದ್ದು ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಬಂಟ್ವಾಳದ ಸಜಿಪಮುನ್ನೂರು ಗ್ರಾಮದ ಕೋಮಾಲಿ ಕೃಷಿಕ ಗಣಪತಿ ಭಟ್ ಆವಿಷ್ಕಾರ  ಮಾಡಿರುವ ಯಂತ್ರ ನಿಜಕ್ಕೂ ರೈತ ಸ್ನೇಹಿಯಾಗಿದೆ.  ಅಡಿಕೆ ಮದ್ದು ಸಿಂಪಡಣೆ ಮತ್ತು ಕೊಯ್ಲಿಗೆ ಅತಿ ಅಗತ್ಯ ಎಂಬ ರೀತಿಯಲ್ಲಿ ರೂಪಗೊಂಡಿದೆ.

ಮಂಗನ ಕಾಯಿಲೆಗೆ ಮದ್ದು ಕಂಡುಹಿಡಿದ ಮಲೆನಾಡ ಹುಡುಗ..ಸಂಪೂರ್ಣ ಉಚಿತ

ಯಂತ್ರದ ಪೂರ್ವಾಪರ: ಮೋಟಾರ್ ಆಧಾರಿತ ಯಂತ್ರ 28 ಕೆಜಿ ತೂಕವಿದೆ. 2 ಸ್ಟ್ರೋಕ್ ಎಂಜಿನ್ ಬಳಕೆ ಮಾಡಲಾಗಿದೆ. 75 ಕೆಜಿ ತೂಕದ ವ್ಯಕ್ತಿ ಆರಾಮವಾಗಿ ಇದರ ಮೇಲೆ ಕುಳಿತು ಕೆಲಸ ಮಾಡಬಹುದು.

30 ಸೆಕೆಂಡ್ ನಲ್ಲಿ ಅಡಿಕೆ ಮರದ ತುದಿ ತಲುಪಬಹುದು. ಪೆಟ್ರೋಲ್ ಮೂಲಕ ಕೆಲಸ ಮಾಡುವ ಯಂತ್ರಕ್ಕೆ ಬೈಕ್ ರೀತಿಯಲ್ಲೇ ಹ್ಯಾಂಡಲ್, ಬ್ರೇಕ್ ಅಳವಡಿಕೆ ಮಾಡಲಾಗಿದೆ. ಒಂದು ಲೀಟರ್ ಪೆಟ್ರೋಲ್ ನಲ್ಲಿ 80 ರಿಂದ 90 ಮರ ಏರಲು ಸಾಧ್ಯವಿದ್ದು ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ದಿನಗಳಲ್ಲಿ  ಅಡಿಕೆ ಬೆಳೆಗಾರನಿಗೆ ನೆಮ್ಮದಿ ತಂದುಕೊಡುವುದರಲ್ಲಿ ಅನುಮಾನ ಇಲ್ಲ.

75 ಸಾವಿರ ರೂ. ವೆಚ್ಚ: ಯಂತ್ರ  ತಯಾರಿಕೆಗೆ 75 ಸಾವಿರ ರೂ. ತಗುಲಿದೆ. ವಿದೇಶಗಳಿಂದಲೂ ಯಂತ್ರಕ್ಕೆ ಬೇಡಿಕೆ ಬರುತ್ತಿದೆ ಎಂದು ಭಟ್ಟರು ತಿಳಿಸುತ್ತಾರೆ.

ನನಗೆ ಇದರಿಂದ ಹಣ ಮಾಡುವ ಯೋಚನೆ ಇಲ್ಲ. ಯಾವುದೇ ಕಾರ್ಪೋರೇಟ್ ಕಂಪನಿಗೆ ನಮ್ಮ ಐಡಿಯಾ ಮಾರುವುದಿಲ್ಲ. ಇದೇನಿದ್ದರೂ ರೈತರ ಅನುಕೂಲಕ್ಕಾಗಿ ಬಳಕೆಯಾಗಬೇಕು.ಸಾಧ್ಯವಾದರೆ ಸರಕಾರ ರೈತರಿಗೆ ಯಂತ್ರದ ಖರೀದಿ ಮೇಲೆ ಸಬ್ಸಿಡಿ ನೀಡುವಂತಹ ಕೆಲಸ ಮಾಡಬೇಕು ಎಂದು ಭಟ್ಟರು ಒತ್ತಾಯಿಸುತ್ತಾರೆ.

"