ಬೆಂಗಳೂರು (ಡಿ. 01): 2018 ಕ್ಕೆ ವಿದಾಯ ಹೇಳುತ್ತಲೇ, 2019 ರ ನೂತನ ವರ್ಷಕ್ಕೆ ಸ್ವಾಗತ ಕೋರುವ ಸಮಯ. ಹಳೆಯ ಸಿಹಿ- ಕಹಿಗಳ ನೆನಪಿನ ಬೆನ್ನಲ್ಲೇ, ಹೊಸ ವರ್ಷ ಹಲವು ನಿರೀಕ್ಷೆಗಳನ್ನು ತನ್ನ ಬೆನ್ನಲ್ಲಿ ಹೊತ್ತು ನಮ್ಮೆಡೆಗೆ ಮುಖ ಮಾಡಿ ನಿಂತಿದೆ. ನಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಹೊಂದಿರುವ, ಸಾಕಷ್ಟು ಕುತೂಹಲ ಮೂಡಿಸಿರುವ 2019 ರಲ್ಲಿ ನಡೆಯುವ ಒಂದಿಷ್ಟು ಘಟನೆಗಳ ಕುರಿತು ಇಲ್ಲಿದೆ ಮುನ್ನೋಟ.

ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಇಂಡಿಯಾ ಶೋ

ಅತ್ಯಂತ ಕುತೂಹಲದ ಏರ್‌ಇಂಡಿಯಾ ಶೋ 2019 ರ ಫೆಬ್ರುವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆ.20-24 ರವರೆಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. 1996 ರಲ್ಲಿ ಮೊದಲ ಬಾರಿ ಆಯೋಜನೆಗೊಂಡಿದ್ದ ಈ ವೈಮಾನಿಕ ಪ್ರದರ್ಶನದಲ್ಲಿ ದೇಶಿ ಮತ್ತು ವಿದೇಶಿ ಕಂಪನಿಗಳು ತಮ್ಮ ಯಂತ್ರೋಪಕರಣ, ಯುದ್ಧ ವಿಮಾನಗಳು ಮತ್ತು ಅವುಗಳ ಸಾಮರ್ಥ್ಯ ಪ್ರದರ್ಶಿಸುತ್ತವೆ. ಪ್ರಸಕ್ತ ವರ್ಷ ನಡೆಯುತ್ತಿರುವುದು 13 ನೇ ಆವೃತ್ತಿಯ ವೈಮಾನಿಕ ಪ್ರದರ್ಶನ.

ಪ್ರತಿ 2 ವರ್ಷಗಳಿಗೊಮ್ಮೆ ಈ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. 2017 ರಲ್ಲಿ ನಡೆದ ಶೋದಲ್ಲಿ 270 ಸ್ವದೇಶಿ, 279 ವಿದೇಶಿ ಕಂಪನಿಗಳು ಸೇರಿ 549 ಕಂಪನಿಗಳು ಭಾಗವಹಿಸಿದ್ದವು. ಒಟ್ಟು 51 ದೇಶಗಳು ಈ ಶೋದಲ್ಲಿ ಭಾಗವಹಿಸಿದ್ದವು. ಬೆಂಗಳೂರಿನ ಹೆಮ್ಮೆ ಎನ್ನಿಸಿಕೊಂಡಿರುವ ಈ ವೈಮಾನಿಕ ಶೋ ಅನ್ನು ಉತ್ತರಪ್ರದೇಶ ಅಥವಾ ಗುಜರಾತ್‌ಗೆ ವರ್ಗಾಯಿಸಲಾಗುತ್ತದೆ ಎಂದು ಭಾರೀ ವದಂತಿ ಹಬ್ಬಿತ್ತು. ಇದು ವಿವಾದಕ್ಕೂ
ಕಾರಣವಾಗಿತ್ತು. 

ಮೋದಿ ಕೊನೆ ಬಜೆಟ್, ಸಂಸತ್ ಚುನಾವಣೆ

ಫೆ.1 ರಂದು ಮೋದಿ ಸರ್ಕಾರದ ಕೊನೆ ಬಜೆಟ್ ಮಂಡನೆಯಾಗಲಿದೆ. ಏಪ್ರಿಲ್ ವತ್ತು ಮೇ ತಿಂಗಳಲ್ಲಿ 17 ನೇ ಲೋಕಸಭೆಗೆ ಚುನಾವಣೆ ನಡೆಯಲಿದೆ. ಲೋಕಸಭೆಯ ೫೪೩ ಸ್ಥಾನಗಳಿಗಾಗಿ ಈ ಚುನಾವಣೆ ನಡೆಯಲಿದೆ. ಬಹುಮತಕ್ಕೆ ಅಗತ್ಯವಾದ 272 ಸ್ಥಾನಗಳನ್ನು ಗೆಲ್ಲುವ ಪಕ್ಷ ಇಲ್ಲವೇ ಮೈತ್ರಿಕೂಟ ಹೊಸ ಸರ್ಕಾರ ರಚಿಸಲಿದೆ. ಇದೇ ವೇಳೆ ಆಂಧ್ರ, ಅರುಣಾಚಲ, ಒಡಿಶಾ, ಕಾಶ್ಮೀರ, ಸಿಕ್ಕಿಂ ಮತ್ತು ಹರ್ಯಾಣ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ.

ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ

2019 ರ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಅರ್ಧಕುಂಭ ಮೇಳ ನಡೆಯಲಿದೆ. 12 ಕೋಟಿಗೂ ಹೆಚ್ಚಿನ ಜನ ಆಗಮಿಸುವ ಈ ಕಾರ್ಯಕ್ರಮಕ್ಕೆ ೨೫೦೦ ಕೋಟಿ ರು. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಉತ್ತರಪ್ರದೇಶ ಸರ್ಕಾರ ಜಾರಿಗೊಳಿಸಿದೆ. ಈ ಹಿಂದಿನ ಕುಂಭಮೇಳ 2013 ರಲ್ಲಿ ನಡೆದಿತ್ತು. 

ರೈಲುಗಳಲ್ಲಿ ತಾಂತ್ರಿಕ ದೋಷ ಪತ್ತೆ

ರೋಬೋನಿತ್ಯ ದೇಶಾದ್ಯಂತ ಸಂಚರಿಸುವ ರೈಲುಗಳಲ್ಲಿನ ಸಣ್ಣಪುಟ್ಟ ದೋಷಗಳನ್ನೂ ರೈಲ್ವೆ ಸಿಬ್ಬಂದಿ ಖುದ್ದಾಗಿ ಪರಿಶೀಲಿಸಬೇಕು. ಆದರೆ ಈ ಕೆಲಸಗಳನ್ನು ಮಾಡುವ ವಿಶಿಸ್ಟ ರೋಬೋಟ್ಗಳನ್ನು ಇದೀಗ ಭಾರತದಲ್ಲೇ ಅಭಿವೃದ್ಧಿಪ ಡಿಸಲಾಗಿದೆ. ರೈಲುಗಳಲ್ಲಿ ರುವ ತಾಂತ್ರಿಕ ಮತ್ತು ಇತರ ದೋಷಗಳನ್ನು ಈ ರೋಬೋಟ್ ಪತ್ತೆ ಹಚ್ಚಬಲ್ಲದು. ಅವುಗಳ ದುರಸ್ತಿ ಕೆಲಸಕ್ಕೆ ನೆರವಾಗಬಲ್ಲವು. ಉಸ್ತಾದ್ ಎಂಬ ಹೆಸರಿನ ಈ ರೋಬೋ ರೈಲಿನ ಸಲಕರಣೆಗಳು, ಯಂತ್ರಗಳ ಫೋಟೋ ಹಾಗೂ ವಿಡಿಯೋಗಳನ್ನು ಅತ್ಯಾಧುನಿಕ ಕ್ಯಾಮರಾಗಳಲ್ಲಿ ಚಿತ್ರಿಸುತ್ತದೆ.

ಆನಂತರ ಅವುಗಳನ್ನು ಎಂಜಿನಿಯರ್‌ಗಳಿಗೆ ರವಾನಿಸುತ್ತದೆ. ಎಂಜಿನಿಯರ್‌ಗಳು ನೀಡುವ ಸೂಚನೆಯಂತೆ ರೋಬೋ ನಿರ್ದಿಷ್ಟ ದಿಕ್ಕಿಗೆ ತಿರುಗಬಲ್ಲದು. ಇಂಥ ರೋಬೋಟ್‌ಗಳು ರವಾನಿಸುವ ಚಿತ್ರಗಳು ಮತ್ತು ವಿಡಿಯೋಗಳನ್ನು ಎಂಜಿನಿಯರುಗಳು ದೊಡ್ಡ ಪರದೆಯ ಮೂಲಕ ನೋಡಬಹುದು. ಅಲ್ಲದೆ, ಅತ್ಯಂತ ಸಣ್ಣದಾದ ಭಾಗಗಳನ್ನು ಹಾಗೂ ಸಂಕೀರ್ಣ ಸ್ಥಳದಲ್ಲಿರುವ ಭಾಗಗಳನ್ನೂ ಈ ರೋಬೋಟ್‌ಗಳ ಸಹಾಯದಿಂದ ಎಂಜಿನಿಯರುಗಳು ಸುಲಭವಾಗಿ ನೋಡಬಹುದು. 2019 ರಲ್ಲಿ ಈ ರೋಬೋಗಳನ್ನು ಎಲ್ಲಾ ರೈಲ್ವೆ ವಿಭಾಗಗಳಲ್ಲೂ  ಅಳವಡಿಸುವ ಯೋಜನೆ ರೈಲ್ವೆಗಿದೆ.

ಈ ವರ್ಷ ಹಳಿ ಮೇಲೆ ಬರುತ್ತೆ ಟ್ರೇನ್ 18

ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆಯ, ಮೊದಲ ಎಂಜಿನ್‌ರಹಿತ ರೈಲು ಟ್ರೈನ್ 18 ರೈಲು 2019 ರ ಜನವರಿಯಲ್ಲಿ ಅಧಿಕೃತವಾಗಿ ಸೇವೆಗೆ ಲಭ್ಯವಾಗಲಿದೆ. ಸಂಪೂರ್ಣ ದೇಶೀಯವಾಗಿ ತಯಾರಿಸಲಾದ ಸೆಮಿ ಹೈಸ್ಪೀಡ್ ರೈಲು ಇದು. 100 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಪ್ರಾಯೋಗಿಕ ಓಡಾಟದ ವೇಳೆ ಗಂಟೆಗೆ 180 ಕಿ.ಮೀ ವೇಗವನ್ನು ಕಾಯ್ದುಕೊಂಡಿತ್ತು. ಟ್ರೈನ್ 18 ಒಟ್ಟು 16 ಕೋಚ್ಗಳನ್ನು ಹೊಂದಿದ್ದು ಏಕಕಾಲಕ್ಕೆ 1,128 ಪ್ರಯಾಣಿಕರನ್ನು ಕರೆದೊಯ್ಯಬಲ್ಲದು. ಸ್ವಯಂಚಾಲಿತ ಬಾಗಿಲುಗಳು, ಮಡಚುವ ಮೆಟ್ಟಿಲುಗಳು, ಇನ್ಫೋಟೈನ್‌ಮೆಂಟ್, ಬಯೋ ವ್ಯಾಕ್ಯೂಮ್ ಶೌಚಾಲಯಗಳು ಮತ್ತು ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ ಸೇರಿದಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಈ ರೈಲು ಒಳಗೊಂಡಿರುತ್ತದೆ. 52 ಸೀಟುಗಳ 2 ಎಕ್ಸಿಕ್ಯೂಟಿವ್ ಕಂಪಾರ್ಟ್‌ಮೆಂಟ್ ಹಾಗೂ ೭೨ ಸೀಟುಗಳ ಟ್ರೈಲರ್ ಕೋಚ್ಗಳನ್ನು ಈ ರೈಲು ಹೊಂದಿರುತ್ತದೆ.

ಸಾಂಪ್ರದಾಯಿಕ ಉಪಗ್ರಹಕ್ಕೆ ಪರ್ಯಾಯ ಸ್ಟ್ರಾಟೋಬಸ್ 

ಸಾಂಪ್ರದಾಯಿಕ ಉಪಗ್ರಹಗಳಿಗೆ ಬದಲಾಗಿ ಅಗ್ಗದ ವೆಚ್ಚದಲ್ಲಿ ಉಪಗ್ರಹಗಳು ಒದಗಿಸುವ ಸೇವೆಯನ್ನು ಒದಗಿಸುವ ಸ್ಟ್ರಾಟೋಬಸ್ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ. ಗೂಗಲ್‌ನ ಪ್ರಾಜೆಕ್ಟ್ ಲೂನ್ ಮಾದರಿಯಲ್ಲೇ ಇಲ್ಲಿ ಭೂಮಿಯಿಂದ 66,000 ಅಡಿ ಎತ್ತರದಲ್ಲಿ ಸ್ಟ್ರಾಟೋಬಸ್‌ಗಳನ್ನು ನಿಲ್ಲಿಸಲಾಗುತ್ತದೆ. ಕಾರ್ಬನ್ ಫೈಬರ್ ಬಳಸಿ ನಿರ್ಮಿಸಲಾಗಿರುವ ಈ ಉಪಕರಣಗಳನ್ನು ಸರಣಿ ರೂಪದಲ್ಲಿ ಅಳವಡಿಸಲಾಗುತ್ತದೆ. ಇವುಗಳ ಮೂಲಕ ನ್ಯಾವಿಗೇಷನ್, ದೂರಸಂಪರ್ಕ, ಭದ್ರತೆ, ಪ್ರಸಾರ ಸೇವೆಗಳನ್ನು ಪಡೆದುಕೊಳ್ಳಬಹುದು.

2019 ರಲ್ಲಿ ಒಟ್ಟಾರೆ 9 ಗ್ರಹಣ ಸಂಭವಿಸುತ್ತದೆ. ಈ ಪೈಕಿ 2 ಗ್ರಹಣಗಳು ಮಾತ್ರವೇ ಭಾರತದಲ್ಲಿ ನೋಡ ಸಿಗಲಿದೆ. ಮೊದಲ ಗ್ರಹಣವು ಜ.6 ರಂದು ಸಂಭವಿಸಲಿದೆ. ಅದು ಭಾಗಶಃ ಸೂರ್ಯ ಗ್ರಹಣವಾಗಿರಲಿದೆ. ಇದು ಭಾರತದಲ್ಲಿ ನೋಡಲು ಸಿಗದು. ಆದರೆ ಜನವರಿ 21 ರಂದು ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಇದನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ. ಇನ್ನು ಜುಲೈ 2-3 ರಂದು ಮತ್ತೊಂದು ಖಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದೆ. ರಾತ್ರಿ ವೇಳೆ ಸಂಭವಿಸುವ ಕಾರಣ, ಇದನ್ನು ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗದು. 

ಹೊಸ ಕೇಬಲ್ ದರ ಜಾರಿಗೆ 

ಗ್ರಾಹಕರು ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿಸಬೇಕೆಂಬ ನೂತನ ಕೇಬಲ್ ಟೀವಿ ದರ ವ್ಯವಸ್ಥೆ 2019 ರ ಫೆಬ್ರವರಿ ೧ರಿಂದ ಜಾರಿಗೆ ಬರಲಿದೆ. ನೂತನ ಕೇಬಲ್ ಟೀವಿ ವ್ಯವಸ್ಥೆ ಜಾರಿಯಿಂದಾಗಿ, ಗ್ರಾಹಕರು ಎಲ್ಲ ಚಾನೆಲ್ಗಳಿಗೂ ಮಾಸಿಕವಾಗಿ ಹಣ ಪಾವತಿ ಮಾಡುವ ಅಗತ್ಯವಿರುವುದಿಲ್ಲ. ಬದಲಿಗೆ ತಾವು ವೀಕ್ಷಿಸುವ ಚಾನೆಲ್‌ಗಳಿಗೆ ಮಾತ್ರ ಇಂತಿಷ್ಟು ಹಣ ಪಾವತಿಸಬೇಕು. ಇದರಿಂದ ಗ್ರಾಹಕರು ತಮಗಿಷ್ಟವಾದ ಚಾನೆಲ್‌ಗಳನ್ನು ಮಾತ್ರ ಹೊಂದಿ, ಉಳಿದ ಚಾನೆಲ್‌ಗಳಿಂದ ದೂರ ಇರುವ ಪರಮಾಧಿಕಾರ ಲಭ್ಯವಾಗಲಿದೆ.