ಖಡಕ್ ಖಾಕಿಗೆ ಅಣ್ಣಾಮಲೈ ಭಾವಪೂರ್ಣ ವಿದಾಯ
ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜಿನಾಮೆ | ಖಾಕಿಗೆ ವಿದಾಯ ಹೇಳುತ್ತಿರುವ ಡಿಸಿಪಿ ಭಾವನಾತ್ಮಕ ಪತ್ರವಿದು...! ರಾಜಿನಾಮೆಗೆ ಕಾರಣವೇನು?
ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರು ಮಾಡಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಹಿಂದಿನ ನಿರ್ಧಾರದ ಬಗ್ಗೆ ಒಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ ಇಲ್ಲಿದೆ.
ಕರ್ನಾಟಕದ ಸಿಂಗಂ IPS ಅಣ್ಣಾಮಲೈ ರಾಜೀನಾಮೆ
ಸ್ನೇಹಿತರೇ ಮತ್ತು ನನ್ನ ಹಿತೈಷಿಗಳೇ,
ಎಲ್ಲರಿಗೂ ನಮಸ್ಕಾರ. ನನ್ನ ರಾಜೀನಾಮೆ ಕುರಿತು ಪ್ರಕಟವಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕೆಲವೊಂದು ವಿಷಯಗಳನ್ನು ನಿಮ್ಮ ಗಮನಕ್ಕೆ ತರ ಬಯಸುತ್ತೇನೆ.
ಇಂದು, ಮೇ 28, 2019 ರಂದು ನಾನು ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇದರ ಆಡಳಿತಾತ್ಮಕ ಪ್ರಕ್ರಿಯೆ ಮುಗಿಯಲು ಕೆಲ ಸಮಯ ತಗಲಬಹುದು. ಈ ಕುರಿತು ಚರ್ಚೆಯಾಗುತ್ತಿರುವ ಎಲ್ಲಾ ಊಹಾಪೋಹಗಳಿಗೆ ಪೂರ್ಣವಿರಾಮವಿಡಲು ನಾನೇ ಖುದ್ದು ಇದನ್ನು ಬರೆಯುತ್ತಿದ್ದೇನೆ.
6 ತಿಂಗಳ ಸುದೀರ್ಘವಾದ ಗಹನ ಚಿಂತನೆಯ ಬಳಿಕ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಳೆದ 9 ವರ್ಷಗಳಿಂದ ನಾನು ಈ ಸೇವೆಯಲ್ಲಿದ್ದು, ಪ್ರತಿ ಕ್ಷಣಗಳನ್ನು ‘ಖಾಕಿ’ ತತ್ವಕ್ಕೆ ಬದ್ಧವಾಗಿ ನಡೆದುಕೊಂಡು ಬಂದಿದ್ದೇನೆ. ಈ ಖಾಕಿಯಲ್ಲಿ ಸಿಗುವ ಹೆಮ್ಮೆಯ ಕ್ಷಣ ಹಾಗೂ ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣಿಯ. ಒಂದರ್ಥದಲ್ಲಿ ಪೊಲೀಸ್ ಸೇವೆಯೆಂದರೆ ದೇವರಿಗೆ ಅತೀ ಇಷ್ಟವಾದುದು ಎಂದು ನಾನು ನಂಬಿದ್ದೇನೆ. ಅತೀ ಒತ್ತಡದಲ್ಲಿ ನಿರ್ವಹಿಸುವ ಈ ಕೆಲಸದಲ್ಲಿ ಕುಂದು ಕೊರತೆಗಳು ಸಾಮಾನ್ಯ. ಅದೆಷ್ಟೋ ಕಾರ್ಯಕ್ರಮಗಳನ್ನು ನಾನು ಮಿಸ್ ಮಾಡಿದ್ದೇನೆ; ಹಲವು ಬಾರಿ ನನ್ನ ಕಷ್ಟಕಾಲದಲ್ಲಿ ನಿಂತವರ ಜೊತೆ ನನಗೆ ನಿಲ್ಲಲಿಕ್ಕಾಗಲಿಲ್ಲ, ಹಲವೊಮ್ಮೆ ಅಸಹಾಯಕತನ ಅನುಭವಿಸದ್ದೇನೆ; ಕೆಲವೊಮ್ಮೆ, ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ವಹಿಸಿದ್ದೇನೆ.
ಕಳೆದ ವರ್ಷ ಕೈಲಾಶ ಮಾನಸಸರೋವರಕ್ಕೆ ನೀಡಿದ ಭೇಟಿ ನನ್ನ ಕಣ್ಣನ್ನು ತೆರೆಸಿದೆ. ಅದು, ಜೀವನದಲ್ಲಿ ಆದ್ಯತೆಯ ವಿಷಯಗಳನ್ನು ನನಗೆ ತಿಳಿಸಿಕೊಟ್ಟಿದೆ. ಮಧುಕರ್ ಶೆಟ್ಟಿ ಸರ್ ನಿಧನವು ಜೀವನದೊಳಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಲು ಪ್ರೇರೇಪಿಸಿದೆ.
ಎಲ್ಲಾ ಒಳ್ಳೆ ಕೆಲಸಗಳು ಒಂದು ದಿನ ಕೊನೆಯಾಗಲೇ ಬೇಕು, ಹಾಗೇಯೇ ನನ್ನ ಖಾಕಿ ದಿನಗಳೂ.. ಈ ನಿಟ್ಟಿನಲ್ಲಿ, ಹಿಂದೆನೇ ನಿರ್ಧಾರ ತೆಗೆದುಕೊಂಡಿದ್ದೆಯಾದರೂ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ ಸರ್ಕಾರಕ್ಕೆ ಸಮಸ್ಯೆ ಉಂಟುಮಾಡುವುದು ಸರಿ ಎನಿಸಲಿಲ್ಲ. ನನ್ನ ರಾಜೀನಾಮೆಯಿಂದ ನಿಮಗೆ ನೋವಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ. ಪ್ರಾಮಾಣಿಕವಾಗಿ ಹೇಳೋದಾದರೆ, ನಾನಿದನ್ನು ಈಗ ಮಾಡಲೇಬೇಕು. ಈ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನನ್ನ ಜೊತೆ ನಿಂತ ನನ್ನ ಆಪ್ತ ಸ್ನೇಹಿತೆ, ನನ್ನ ಮಡದಿಗೆ ಇದು ಬಹಳ ಭಾವನಾತ್ಮಕ ಸನ್ನಿವೇಶ.
ಮುಂದೇನು?
ನನ್ನ ಮುಂದಿನ ನಡೆಯೇನು ಎಂದು ತಿಳಿಯಲು ಬಯಸುವವರಿಗೆ ಹೇಳೋದಾದರೆ, ಬಹಳ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಲು, ನಾನೊಬ್ಬ ಸಣ್ಣ ಮನುಷ್ಯ. ನಾನು ಜೀವನದಲ್ಲಿ ಕಳೆದುಕೊಂಡಿರುವ ಸಣ್ಣ ಪುಟ್ಟ ಸಂತೋಷಗಳನ್ನು ಮತ್ತೆ ಪಡೆಯಲು ಸಮಯ ಕಳೆಯಬೇಕು. ಬೆಳೆಯುತ್ತಿರುವ ನನ್ನ ಮಗನಿಗೆ ಒಳ್ಳೆ ತಂದೆಯಾಗಬೇಕು. ಆತನಿಗೆ ನನ್ನ ಅಗತ್ಯವಿದೆ.
ವಾಪಸು ಮನೆಗೆ ಮರಳಿ ಕೃಷಿ ಮಾಡಬೇಕು. ನಾನೀಗ ಪೊಲೀಸ್ ಅಧಿಕಾರಿಯಲ್ಲ, ನಾನೇ ಸಾಕಿದ ಕುರಿಗಳೂ ನಾನು ಹೇಳಿದ ಮಾತನ್ನು ಕೇಳುತ್ತವೋ, ಇಲ್ಲ ಗೊತ್ತಿಲ್ಲ. ಸಿಕ್ಕಿರುವ ಅವಕಾಶಗಳ ಬಗ್ಗೆ ಮಾತನಾಡಲು ನನ್ನಂಥ ನಶ್ವರ ಮನುಷ್ಯನಿಗೆ, ಜೀವನವು ಸಿಕ್ಕಿರುವ ಒಂದು ಬಲುದೊಡ್ಡ ಅವಕಾಶ.
ನನ್ನ ವೃತ್ತಿ ಜೀವನದ ಪ್ರತಿ ಹೆಜ್ಜೆಯಲ್ಲೂ, ನ್ಯಾಯದ ಹೋರಾಟದಲ್ಲಿ ನನ್ನ ಜೊತೆ ನಿಂತ ಕಾರ್ಕಳ, ಉಡುಪಿ ಮತ್ತು ಬೆಂಗಳೂರಿನ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅಪೂರ್ಣವಾಗಿದ್ದ ನನ್ನನ್ನು ಪರಿಪೂರ್ಣ ಮನುಷ್ಯನಾಗಿ ರೂಪಿಸಿದ್ದು ಈ ಜನ. ನನಗೆ ವೃತ್ತಿಪಾಠವನ್ನು ಕಲಿಸಿದ ಹಿರಿಯ ಸಹದ್ಯೋಗಿಗಳ ಮಾರ್ಗದರ್ಶನ ಹಾಗೂ ವೃತ್ತಿನಿಷ್ಠರಾಗಿರುವ ಕಿರಿಯ ಸಹದ್ಯೋಗಿಗಳನ್ನು ನಾನು ಬಹಳ ಮಿಸ್ ಮಾಡುವೆ. ಹಿರಿಯ ಕಿರಿಯ ಪೇದೆಗಳನ್ನೂ ಅಷ್ಟೇ ಮಿಸ್ ಮಾಡುವೆ. ನಾನು ಅವರಿಗಾಗಿ ಜೀವಿಸಿದ್ದೇನೆ, ಅವರ ಹಕ್ಕು-ಉತ್ತಮ ಜೀವನ ಗುಣಮಟ್ಟ ಅವರಿಗೆ ಸಿಗುವಂತಾಗಲು ನಾನು ಪರಿಶ್ರಮ ಪಟ್ಟಿದ್ದೇನೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಾನು ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ನನ್ನಿಂದ ಯಾವುದೇ ತಪ್ಪಾಗಿದ್ದರೂ, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನಾನೂ ನಿಮ್ಮಂತೆ ಒಬ್ಬ ಮನುಷ್ಯ.
ನಾನು ನಿಮ್ಮೆಲ್ಲರನ್ನು ಮಿಸ್ ಮಾಡ್ತೇನೆ, ವಿಶೇಷವಾಗಿ ನಿಮ್ಮಲ್ಲೆರ ಪ್ರೀತಿ ಹಾಗೂ ವಿಶ್ವಾಸವನ್ನು.
ನಿಮ್ಮ ಪ್ರೀತಿಯ
ಅಣ್ಣಾಮಲೈ
"