ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಪರಿಹಾರ : ಶಾ

First Published 27, Feb 2018, 7:36 AM IST
Amith Shah Talk About Mahadayi Issue In Kalaburagi
Highlights

ಕಾಂಗ್ರೆಸ್‌ ಅಂದ್ರೆ ತ್ರಿಡಿ (ಧೋಖೇಬಾಜಿ, ದಾದಾಗಿರಿ, ಡೈನಾಸ್ಟಿ) ಪಕ್ಷ’. ಮುಂಬರುವ ವಿಧಾನ ಸಭಾ ಚುನಾವಣೆ ಪ್ರಚಾರಾರ್ಥ ಹೈದ್ರಾಬಾದ್‌ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾಂಗ್ರೆಸ್‌ ಪಕ್ಷವನ್ನು ಜರೆದದ್ದು ಹೀಗೆ. ಸೋಮವಾರ ಪ್ರಚಾರ ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂ ಸಿಂಗ್‌ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಹೈದರಾಬಾದ್‌ ಕರ್ನಾಟಕ ನೆಲದ ಇಂದಿನ ಪರಿಸ್ಥಿತಿಗೆ ಇವರಿಬ್ಬರೇ ಕಾರಣ ಎಂದು ಜರೆದರು.

ಕಲಬುರಗಿ : ‘ಕಾಂಗ್ರೆಸ್‌ ಅಂದ್ರೆ ತ್ರಿಡಿ (ಧೋಖೇಬಾಜಿ, ದಾದಾಗಿರಿ, ಡೈನಾಸ್ಟಿ) ಪಕ್ಷ’. ಮುಂಬರುವ ವಿಧಾನ ಸಭಾ ಚುನಾವಣೆ ಪ್ರಚಾರಾರ್ಥ ಹೈದ್ರಾಬಾದ್‌ ಕರ್ನಾಟಕ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಾಂಗ್ರೆಸ್‌ ಪಕ್ಷವನ್ನು ಜರೆದದ್ದು ಹೀಗೆ. ಸೋಮವಾರ ಪ್ರಚಾರ ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿವಂಗತ ಧರಂ ಸಿಂಗ್‌ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಹೈದರಾಬಾದ್‌ ಕರ್ನಾಟಕ ನೆಲದ ಇಂದಿನ ಪರಿಸ್ಥಿತಿಗೆ ಇವರಿಬ್ಬರೇ ಕಾರಣ ಎಂದು ಜರೆದರು.

ಇನ್ನು ಕಲಬುಗರಿಯಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಮಹದಾಯಿ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಕಲಬುರಗಿ ನಗರದಲ್ಲಿ ಹಿಂದುಳಿದ ವರ್ಗದ ಸಮಾಜಗಳ ಮುಖಂಡರ ಜೊತೆಗಿನ ಸಂವಾದ ಮತ್ತು ಬೀದರ್‌ ಜಿಲ್ಲೆಯ ಬಸವಕಲ್ಯಾಣದ ನವಶಕ್ತಿ ಸಮಾವೇಶ ಮತ್ತು ಸುದ್ದಿಗೋಷ್ಠಿಗಳಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದರು.

3ಡಿ ಕಾಂಗ್ರೆಸ್‌: ಕಾಂಗ್ರೆಸ್‌ ಅಂದ್ರೆ 3ಡಿ ಪಕ್ಷ. ಧೋಖೇಬಾಜಿ, ದಾದಾಗಿರಿ, ಡೈನಾಸ್ಟಿ(ವಂಶ ಪಾರಂಪರ್ಯ ರಾಜಕೀಯ) ಪಾಲಿಟಿಕ್ಸ್‌ ತುಂಬಿ ತುಳುಕುತ್ತಿರೋ ಪಕ್ಷ. ಭ್ರಷ್ಟಾಚಾರಕ್ಕೆ ಪರ್ಯಾಯ ಪದವೇ ಕರ್ನಾಟಕದಲ್ಲಿರೋ ಸಿದ್ದು ಸರ್ಕಾರ. ಹಿಂದುಳಿದಿರುವಿಕೆಯ ವಿಶ್ವರೂಪಕ್ಕೆ ಉದಾಹರಣೆಯೆಂದರೆ ಕಾಂಗ್ರೆಸ್‌ ಸಂಸದೀಯ ಗುಂಪಿನ ನಾಯಕ ಖರ್ಗೆ ಅವರು 5 ದಶಕದಿಂದ ರಾಜಕೀಯ ಮಾಡುತ್ತಿರುವ ಕಲಬುರಗಿ ಒಳಗೊಂಡ ಹೈ- ಕ ಪ್ರದೇಶ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಇಲ್ಲಿರೋದು ಪರ್ಸೆಂಟೇಜ್‌ ಸರ್ಕಾರ ಎಂಬ ಹೇಳಿಕೆಗೆ ಬಿಜೆಪಿ ಬದ್ಧವಾಗಿದೆ. ಪರ್ಸೆಂಟೇಜ್‌ ಸರ್ಕಾರ ಎಂದು ಹೇಳಲು ಸಿಎಂ ಕಟ್ಟಿರುವ ಲಕ್ಷಾಂತರ ರು ಬೆಲೆಬಾಳುವ ವಾಚ್‌ಗಿಂತ ಅನ್ಯಸಾಕ್ಷಿ ಬೇಕೆ? ಸಿದ್ದರಾಮಯ್ಯ ತಮ್ಮ ವಾಚ್‌ ಕಥೆ ಏನೆಂದು ಹೇಳಲಿ, ನಂತರ ಪರ್ಸೆಂಟೇಜ್‌ ವಿಚಾರ ತಾನಾಗಿಯೇ ಬಯಲಾಗುತ್ತದೆ ಎಂದು ಕುಟುಕಿದರು.

ಕಾನೂನು-ಸುವ್ಯವಸ್ಥೆಯಲ್ಲಿ, ಅಭಿವೃದ್ಧಿ ವಿಚಾರದಲ್ಲಿ, ಮಠ- ಮಂದಿರ ನಿರ್ವಹಣೆ, ಭ್ರಷ್ಟಾಚಾರ ನಿಯಂತ್ರಣ ಹೀಗೆ ಎಲ್ಲದರಲ್ಲೂ ಸಿದ್ದು ಸರ್ಕಾರ ವಿಫಲವಾಗಿದೆ. ಕರ್ನಾಟಕದಲ್ಲಂತೂ ಭ್ರಷ್ಟಾಚಾರಕ್ಕೆ ಸಿದ್ದು ಸರ್ಕಾರವೇ ಪರ್ಯಾಯ ಪದವಾಗಿದೆ ಎಂದು ಶಾ ಟೀಕಿಸಿದರು. ಮತೀಯ ಗಲಭೆ ಹುಟ್ಟುಹಾಕುವಲ್ಲಿ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್‌ನತ್ತ ಬೆರಳು ಮಾಡಿದ, ಎಸ್‌ಡಿಪಿಐ, ಪಿಎಫ್‌ಐ ಬಗ್ಗೆ ಮೃದುಧೋರಣೆ ತಳೆಯುತ್ತಿದ್ದಾರೆ ಎಂದು ಖಂಡಿಸಿದರು.

ಇದೇವೇಳೆ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಿಎಂ ದಿವಂಗತ ಧರ್ಮಸಿಂಗ್‌ ಅವರ ಆಡಳಿತದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು. ಹೈದ್ರಾಬಾದ್‌ ಕರ್ನಾಟಕದಲ್ಲಿ ಸುಮಾರು 50 ವರ್ಷಗಳಿಂದ ರಾಜಕಾರಣದಲ್ಲಿರುವ ಇವರಿಬ್ಬರು ಕೇವಲ ತಮ್ಮ ಮಕ್ಕಳನ್ನು ಬೆಳೆಸಿದ್ದು ಬಿಟ್ಟರೆ ಕ್ಷೇತ್ರಕ್ಕೆ ಏನನ್ನೂ ಮಾಡಿಲ್ಲ ಎಂದರು.

ನಾವು ಲೆಕ್ಕಕೊಡಬೇಕಿಲ್ಲ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗೆ ನಾವು ಬಿಜೆಪಿಯವರು ಕೇಂದ್ರದ ಸಾಧನೆಯ ಲೆಕ್ಕ ಕೊಡಬೇಕಿಲ್ಲ, ನಾಲ್ಕು ತಲೆಮಾರಿನ 60 ವರ್ಷಗಳ ಆಡಳಿತ ನಡೆಸಿದ ಗಾಂಧಿ ಕುಟುಂಬ ದೇಶದ ಜನತೆಗೆ ಲೆಕ್ಕ ಕೊಡುವ ಅಗತ್ಯವಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ 112 ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ನಮ್ಮ ಸಾಧನೆಗಳನ್ನು ಭಾಗವತ್‌ ಸಪ್ತಾಹದಂತೆ ವಾರಗಟ್ಟಲೇ ಹೇಳಬೇಕಾಗುತ್ತದೆ. ರಾಹುಲ್‌ ಗಾಂಧಿ ಅವುಗಳನ್ನು ಏಣಿಸುತ್ತಲೇ ಸುಸ್ತಾಗಿ ಬಿಡುತ್ತಾರೆ ಎಂದರು.

ಕೇಂದ್ರ ತೊಗರಿ ಖರೀದಿಸಿದೆ: ಕೇಂದ್ರ ತೊಗರಿ ಖರೀದಿಸಿಲ್ಲವೆಂದು ರಾಜ್ಯ ಸರ್ಕಾರ ಹೇಳಿಕೆ ನೀಡುತ್ತಿದೆ. ಆದರೆ ನಾವು ಬೆಲೆ ಸ್ಥಿರೀಕರಣದಲ್ಲಿ 26 ಲಕ್ಷ ಕ್ವಿಂಟಾಲ್‌ ತೊಗರಿ ಖರೀದಿಸಿದ್ದೇವೆ. ಕೇಂದ್ರ 26 ಲಕ್ಷ ಕ್ವಿಂಟಾಲ್‌ ತೊಗರಿ ಖರೀದಿಸಿದ್ದರೆ, ರಾಜ್ಯ ಖರೀದಿಸಿದ್ದು ಕೇವಲ 1. 65 ಲಕ್ಷ ಕ್ವಿಂಟಾಲ್‌. ಬೆಂಬಲ ಬೆಲೆಗೆ 450 ರು. ಸೇರಿಸಿ ಹಣ ಕೊಡುತ್ತಿದ್ದಾರೆ. ರಾಜ್ಯದವರು ನಮ್ಮನ್ನೇಕೆ ವೃಥಾ ತೆಗಳುತ್ತಿದ್ದಾರೆ? ಇವರೇ ಖರೀದಿಗೆ ಮುಂದಾಗಲಿ. ತೊಗರಿ ಖರೀದಿಯಲ್ಲಿನ ಗೊಂದಲಕ್ಕೆ ರಾಜ್ಯ ಕಾರಣವೇ ಹೊರತು ಕೇಂದ್ರವಲ್ಲ ಎಂದಿದ್ದಾರೆ.

ಟ್ರಾನ್ಸ್‌ಫಾರ್ಮರ್‌ ಸರಿಯಿಲ್ಲ: ಕೇಂದ್ರ ಸರ್ಕಾರವು ವಿದ್ಯುತ್‌ ತಯಾರಿಸುವ ಕಾರ್ಖಾನೆಯಿದ್ದಂತೆ. ಕರ್ನಾಟಕ ಸರ್ಕಾರ ಟ್ರಾನ್ಸ್‌ಫಾರ್ಮರ್‌ ಇದ್ದಂತೆ. ಕರ್ನಾಟಕ ಸರ್ಕಾರದ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋಗಿರುವುದರಿಂದ ಹಳ್ಳಿಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬೆಳಕು ತಲುಪುತ್ತಿಲ್ಲ. ಹಾಗಾಗಿ ಸುಟ್ಟುಹೋದ ಕಾಂಗ್ರೆಸ್‌ ಸರ್ಕಾರದ ಕಿತ್ತು ಒಗೆದು ಬಿಜೆಪಿ ಸರ್ಕಾರವನ್ನು ತನ್ನಿ ಎಂದರು.

loader