ಹೊಂದಾಣಿಕೆ ರಾಜಕೀಯಕ್ಕೆ ಅಮಿತ್ ಶಾ ಬ್ರೇಕ್

First Published 29, Mar 2018, 7:29 AM IST
Amith Shah give strict warning about BJP Tickets
Highlights

ಹಿಂದಿನ ಹಲವು ಚುನಾವಣೆಗಳಿಂದ ರಾಜ್ಯ ಬಿಜೆಪಿಯ ಕೆಲವು ನಾಯಕರು ನಡೆಸಿಕೊಂಡು ಬಂದಿದ್ದ ಹೊಂದಾಣಿಕೆ ರಾಜಕೀಯಕ್ಕೆ (ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ರೇಕ್ ಹಾಕಿದ್ದಾರೆ.

ಬೆಂಗಳೂರು : ಹಿಂದಿನ ಹಲವು ಚುನಾವಣೆಗಳಿಂದ ರಾಜ್ಯ ಬಿಜೆಪಿಯ ಕೆಲವು ನಾಯಕರು ನಡೆಸಿಕೊಂಡು ಬಂದಿದ್ದ ಹೊಂದಾಣಿಕೆ ರಾಜಕೀಯಕ್ಕೆ (ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ರೇಕ್ ಹಾಕಿದ್ದಾರೆ.

ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಗೆಲುವು, ವ್ಯವಹಾರ ಹಾಗೂ ಸಂಬಂಧ ಉಳಿಸಿಕೊಳ್ಳುವುದಕ್ಕಾಗಿ ಇತರೆ ಪಕ್ಷಗಳ ಮುಖಂಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ದುರ್ಬಲ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುವ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಇನ್ನು ಮುಂದೆ ಇದಕ್ಕೆ ಅವಕಾಶವಿಲ್ಲ ಎಂದು ಅಮಿತ್ ಶಾ ಅವರು ತಮ್ಮ ಪಕ್ಷದ ರಾಜ್ಯ ನಾಯಕರಿಗೆ ಖಡಕ್ಕಾಗಿಯೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹೊಂದಾಣಿಕೆ ರಾಜಕೀಯ ಕುರಿತಂತೆ ಅಮಿತ್ ಶಾ ಅವರು ಕರಾರು ವಾಕ್ಕಾಗಿ ಕ್ಷೇತ್ರವಾರು ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ಇಂಥದ್ದೊಂದು ಫರ್ಮಾನು ಹೊರಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮಿತ್ ಶಾ ಅವರ ಈ ಫರ್ಮಾನು ಪಕ್ಷದ ಅನೇಕ ರಾಜ್ಯ ನಾಯಕರಿಗೆ ನಿರಾಸೆ ಉಂಟು ಮಾಡಿದೆ. ಹಾಗಂತ ಇದು ಕೇವಲ ಬಿಜೆಪಿಯಲ್ಲಷ್ಟೇ ಅಲ್ಲ, ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಲ್ಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಅಮಿತ್ ಶಾ ಅವರು ತಮ್ಮ ಪಕ್ಷದಲ್ಲಿನ ಇಂಥ ಬೆಳವಣಿಗೆಗಳಿಗೆ ತಡೆಯೊಡ್ಡಲು ಮುಂದಾಗಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಬಿಜೆಪಿಯ ಹಿರಿಯ ನಾಯಕರು ತಮ್ಮ ಅನುಕೂಲಕ್ಕಾಗಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಕೆಲ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುತ್ತಿದ್ದರು. ಇದರಲ್ಲಿ ಎಲ್ಲರೂ ಅಲ್ಲದಿದ್ದರೂ ಹಲವು ಹಿರಿಯ ನಾಯಕರು ತೊಡಗಿದ್ದುದು ಹಿಂದಿನ ಚುನಾವಣೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಗಮನಿಸಿದರೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಉದಾಹರಣೆಗೆ ಹಿರಿಯ ನಾಯಕರಾಗಿರುವ ಸಂಸದರೊಬ್ಬರು ಮುಂದಿನ ಸಂಸತ್ ಚುನಾವಣೆಯ ಗೆಲುವಿಗೆ ನೆರವಾಗುವ ಉದ್ದೇಶದಿಂದ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳು ಜಯ ಗಳಿಸುವುದಕ್ಕೆ ಪೂರಕವಾಗಿ ತಮ್ಮ ಪಕ್ಷದಿಂದ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು, ವಿಧಾನಸಭಾ ಚುನಾವಣೆಯಲ್ಲಿ ತಾವು ಗೆಲ್ಲುವುದಕ್ಕಾಗಿ ಹಿರಿಯ ನಾಯಕರೊಬ್ಬರು ಪ್ರತಿಪಕ್ಷದ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪರಸ್ಪರ ದುರ್ಬಲ ಅಭ್ಯರ್ಥಿಗಳು ಸ್ಪರ್ಧಿಸುವಂತೆ ನೋಡಿಕೊಳ್ಳುವುದು ನಡೆದುಕೊಂಡೇ ಬಂದಿದೆ.

ಈ ಮಾಹಿತಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದರೂ ಮೌನಕ್ಕೆ ಶರಣಾಗುತ್ತಿದ್ದರು. ಆದರೆ, ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದರ ಸಂಪೂರ್ಣ ಮಾಹಿತಿಯನ್ನು ತರಿಸಿಕೊಂಡು ಅವಲೋಕನ ನಡೆಸಿದ್ದಾರೆ. ಪಕ್ಷದ ಕೆಲವು ರಾಜ್ಯ ನಾಯಕರ ಈ ನಡೆಯನ್ನು ಸಹಿಸುವುದಿಲ್ಲ. ಈ ಚುನಾವಣೆಯಲ್ಲಿ ಇಂಥ ಆಸೆಯನ್ನೇ ಇಟ್ಟುಕೊಳ್ಳಬೇಡಿ.

ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ಗೆಲ್ಲಿ ಎಂಬ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಯಾರೋ ಒಬ್ಬರು ತಮ್ಮ ಗೆಲುವಿಗಾಗಿ ತಮ್ಮ ಪ್ರಭಾವ ಬಳಸಿಕೊಂಡು ಬೇರೆ ಪಕ್ಷಗಳಿಂದ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಂಡು, ಅದಕ್ಕೆ ಪ್ರತಿಯಾಗಿ ಬೇರೊಂದು ಕ್ಷೇತ್ರದಲ್ಲಿ ಪ್ರತಿಪಕ್ಷದ ಮುಖಂಡರಿಗೆ ಅನುಕೂಲವಾಗಲು ನಮ್ಮ ಪಕ್ಷದಿಂದ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಯಾವ ನ್ಯಾಯ? ಈ ಚುನಾವಣೆಯಿಂದಲೇ ಇದನ್ನು ನಿಲ್ಲಿಸಿ. ಯಾವ ಕಾರಣಕ್ಕೂ ಇಂಥ ಪ್ರವೃತ್ತಿಯನ್ನು ಸಹಿಸುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

loader