ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿನ ಸೋಲು ರಾಜ್ಯ ಬಿಜೆಪಿ ನಾಯಕರನ್ನಷ್ಟೇ ಅಲ್ಲದೆ ಪಕ್ಷದ ರಾಷ್ಟ್ರೀಯ ನಾಯಕರಿಗೂ ತೀವ್ರ ನಿರಾಸೆ ಉಂಟುಮಾಡಿದೆ.
ಬೆಂಗಳೂರು (ಏ.13): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿನ ಸೋಲು ರಾಜ್ಯ ಬಿಜೆಪಿ ನಾಯಕರನ್ನಷ್ಟೇ ಅಲ್ಲದೆ ಪಕ್ಷದ ರಾಷ್ಟ್ರೀಯ ನಾಯಕರಿಗೂ ತೀವ್ರ ನಿರಾಸೆ ಉಂಟುಮಾಡಿದೆ.
ಎರಡು ಕ್ಷೇತ್ರಗಳ ಪೈಕಿ ಕನಿಷ್ಠ ಒಂದರಲ್ಲಾದರೂ ಗೆಲ್ಲುವ ನಿರೀಕ್ಷೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ಹೊಂದಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾದ ಬೆನ್ನಲ್ಲೇ ಮುಂದಿನ ೨೦೧೮ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗಮನದಲ್ಲಿರಿಸಿಕೊಂಡು ರಣತಂತ್ರ ರೂಪಿಸಲು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದ ತಂಡ ಸಜ್ಜಾಗುವ ಸಾಧ್ಯತೆಯಿದೆ.
ಅಂದರೆ, ಪಕ್ಷದ ರಾಜ್ಯ ಘಟಕದ ಬೆಳವಣಿಗೆಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಹೈಕಮಾಂಡ್‌ನ ಮಧ್ಯೆ ಪ್ರವೇಶ ಹೆಚ್ಚಾಗುವುದು ಅಥವಾ ಹಿಡಿತ ಮತ್ತಷ್ಟು ಬಿಗಿಗೊಳಿಸುವುದು ಸ್ಪಷ್ಟವಾಗಿದೆ. ಶೀಘ್ರದಲ್ಲೇ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುವ ಸಂಭವವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಉತ್ತರ ಭಾರತದ ಪ್ರಮುಖ ರಾಜ್ಯವಾಗಿದ್ದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಮಿತ್ ಶಾ ಅವರ ಮುಂದಿನ ಗುರಿ ದಕ್ಷಿಣ ಭಾರತ. ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕ. ಒಂದು ಬಾರಿ ಅಲ್ಪಮತಗಳ ಕೊರತೆಯಿಂದ ಅಧಿಕಾರದ ಗದ್ದುಗೆ ಏರಿ ಸಾಕಷ್ಟು ತೊಂದರೆ ಎದುರಿಸಿರುವ ಬಿಜೆಪಿ ವರಿಷ್ಠರಿಗೆ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶವಿದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡಬೇಕು ಎಂಬ ಬಿಜೆಪಿ ವರಿಷ್ಠರ ಸಂಕಲ್ಪ ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚಿಸಿರುವ ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಬಲವಾದ ಸಂಘಟನೆ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಮೂಲೆಗುಂಪು ಮಾಡುವ ಸನ್ನಾಹದಲ್ಲಿದ್ದಾರೆ. ಅದಕ್ಕಾಗಿಯೇ ಪಕ್ಷದ ರಾಜ್ಯ ಘಟಕದ ಹಲವು ಹಿರಿಯ ನಾಯಕರ ಅಪಸ್ವರದ ನಡುವೆಯೂ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರ ಕೈಯಲ್ಲೂ ನಾಯಕತ್ವ ನೀಡಲು ಸಾಧ್ಯವಿಲ್ಲದ ಅನಿವಾರ್ಯ ಪರಿಸ್ಥಿತಿಯೂ ಇದೆ.
ಇದೀಗ ಯಡಿಯೂರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರು ಪಕ್ಷದ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ನಿಷ್ಠಾವಂತರನ್ನು ಕೈಬಿಟ್ಟರು ಎಂಬ ಕೂಗು ಕೇಳಿಬಂದಿದೆ. ಸಾಕಷ್ಟು ವಿರೋಧದ ನಂತರ ಸ್ವತಃ ಅಮಿತ್ ಶಾ ಅವರೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ. ಆಗಲೂ ಯಡಿಯೂರಪ್ಪ ಅವರ ಮಾತಿಗೇ ಹೆಚ್ಚು ಮಣೆ ಹಾಕಿದ್ದಾರೆ ಎಂಬುದು ಗಮನಾರ್ಹ.
ನಂತರದ ದಿನಗಳಲ್ಲಿ ಪಕ್ಷಕ್ಕೆ ಇತರ ಪಕ್ಷಗಳ ಮುಖಂಡರನ್ನು ಕರೆತರುವಲ್ಲಿ ಅಥವಾ ಇತರೆ ಪ್ರಮುಖ ನಿರ್ಧಾರಗಳಲ್ಲಿ ಅವರು ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯವನ್ನೇ ನೀಡಿದ್ದರು. ಯಾವುದನ್ನೂ ಹೆಚ್ಚು ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ಈ ಉಪಚನಾವಣೆಯ ಪ್ರಕ್ರಿಯೆಯಲ್ಲೂ ಹೈಕಮಾಂಡ್ ಯಡಿಯೂರಪ್ಪ ಅವರ ಮಾತಿಗೇ ಸಹಮತ ವ್ಯಕ್ತಪಡಿಸಿತ್ತು. ಒಂದು ವೇಳೆ ಈ ಉಪಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ್ದಲ್ಲಿ ಸಹಜವಾಗಿಯೇ ಯಡಿಯೂರಪ್ಪ ಅವರ ಮಾತೇ ಅಂತಿಮ ಎನ್ನುವಂತಿರುತ್ತಿತ್ತು. ಅವರ ಅಭಿಪ್ರಾಯಕ್ಕೇ ಸೈ ಎನ್ನುತ್ತಿದ್ದರು.
ಆದರೆ, ಇದೀಗ ಫಲಿತಾಂಶ ಹೊರಬಿದ್ದ ಬಳಿಕ ವರಿಷ್ಠರು ಚಿಂತಿತರಾಗಿದ್ದಾರೆ. ಹಾಗಂತ ಯಡಿಯೂರಪ್ಪ ಅವರ ಬಲ ಕುಂದಿಸುವ ಪ್ರಯತ್ನಕ್ಕೆ ಕೈಹಾಕುವುದಿಲ್ಲ. ಬದಲಾಗಿ, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ರಣತಂತ್ರ ರೂಪಿಸುವಲ್ಲಿ, ಮುಂದಿನ ಚುನಾವಣೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವರಿಷ್ಠರು ಮಧ್ಯೆ ಪ್ರವೇಶಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ರಾಜ್ಯ ಘಟಕದ ನಿಯಂತ್ರಣ ಹೈಕಮಾಂಡ್‌ಗೆ ಹಸ್ತಾಂತರವಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.
