ಪಕ್ಷದ ಸಂಘಟನೆ ಮತ್ತು ಬಲಗೊಳಿಸುವ ನಿಟ್ಟಿನಲ್ಲಿ ದೇಶದ್ಯಾಂತ ವಿಸ್ತಾರಕರಾಗಿ ಪ್ರವಾಸ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬರುವ ಆಗಸ್ಟ್‌ 3ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ತಂಗಲಿದ್ದು, ಮೊದಲ ದಿನ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.
ಬೆಂಗಳೂರು: ಪಕ್ಷದ ಸಂಘಟನೆ ಮತ್ತು ಬಲಗೊಳಿಸುವ ನಿಟ್ಟಿನಲ್ಲಿ ದೇಶದ್ಯಾಂತ ವಿಸ್ತಾರಕರಾಗಿ ಪ್ರವಾಸ ಮಾಡುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರುವ ಆಗಸ್ಟ್ 3ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ತಂಗಲಿದ್ದು, ಮೊದಲ ದಿನ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.
ನಂತರದ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡುವ ಮೂಲಕ ಪಕ್ಷ ಸಂಘಟನೆಗೆ ಸಂಬಂಧಿಸಿದ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ದಿನ ಬೆಳಗಾವಿ ಭೇಟಿ ವೇಳೆ ಅಮಿತ್ ಶಾ ಅವರು ಆ ಭಾಗದ ಪದಾಧಿಕಾರಿಗಳು ಮತ್ತು ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ಇಡೀ ದಿನ ಪಕ್ಷದ ಬಲಗೊಳಿಸುವಿಕೆ ಮತ್ತು ಸಂಘಟನೆ ಕುರಿತು ವಿವಿಧ ಹಂತದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ರಾಜ್ಯ ನಾಯಕರೂ ಈ ಸಂದರ್ಭ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದೇ ದಿನ ರಾತ್ರಿ ಅಥವಾ ಮರುದಿನ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿಗೆ ಆಗಮಿಸಿ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರ, ಪದಾಧಿಕಾರಿಗಳೊಂ ದಿಗೆ ಸಂವಾದ ನಡೆಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸುವ ಚಿಂತನೆಯೂ ಇದೆ ಎನ್ನಲಾಗಿದೆ.
ವಿಸ್ತಾರಕ್ ಯೋಜನೆ: ಜನಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ದೀನ್ದಯಾಳ್ ಉಪಾಧ್ಯ ಅವರ ಶತಮಾ ನೋತ್ಸವ ಪ್ರಯುಕ್ತ ಪಕ್ಷವನ್ನು ಬೂತ್ಮಟ್ಟದಲ್ಲಿ ಬಲಗೊಳಿಸಲು ವಿಸ್ತಾರಕ್ ಯೋಜನೆಯನ್ನು ಹಮ್ಮಿಕೊಂ ಡಿದೆ. ಈ ಯೋಜನೆಯಡಿ ಕಾರ್ಯಪ್ರವೃತ್ತರಾಗಿರುವ ಅಮಿತ್ ಶಾ ಅವರು 110 ದಿನಗಳ ವಿಸ್ತಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಶದ ಹಲವು ರಾಜ್ಯ ಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ಅದು ಮುಂದುವರೆದಿದೆ. ಬೂತ್ ಮಟ್ಟದಲ್ಲಿ ಪಕ್ಷದ ಬಲವರ್ಧನೆಗಾಗಿ 110 ದಿನಗಳ ವಿಸ್ತಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಕೆಲಸ ಆರಂಭಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಕೇರಳ ರಾಜ್ಯಕ್ಕೆ ಭೇಟಿ ನೀಡಿ ಮೂರು ದಿನಗಳ ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸುವ ಸಂಬಂಧ ಮುಖಂಡರಲ್ಲಿ ಚರ್ಚಿಸಿದ್ದಾರೆ. ರಾಜ್ಯಕ್ಕೆ ಆಗಮಿಸುವ ವೇಳೆಗೆ ಇಲ್ಲಿನ ವಿವಿಧ ಹಂತದ ಮುಖಂಡರು 15 ದಿನಗಳ ಕಾಲ ವಿಸ್ತಾರಕರಾಗಿ ಕಾರ್ಯನಿರ್ವಹಿಸಿ ವರದಿಯನ್ನು ಸಿದ್ಧಪಡಿಸಬೇಕಿದೆ. ಬಳಿಕ ಅಮಿತ್ ಶಾ ಅವರು ಆ ಬಗ್ಗೆ ಚರ್ಚಿಸಿ ಕೆಲವೊಂದು ನಿರ್ದೇಶನ ನೀಡಲಿದ್ದಾರೆ.
