ಗದಗ [ಜು.07] : ಮೈತ್ರಿ ಸರ್ಕಾರದ ಅತೃಪ್ತರ ರಾಜೀನಾಮೆ ಹಿಂದೆ ಅಮಿತ್ ಶಾ, ಮೋದಿ ಕುತಂತ್ರವಿದೆ. ಸಿದ್ದರಾಮಯ್ಯನವರ ಯಾವುದೇ ಪಾತ್ರವಿಲ್ಲ ಎಂದು ಕಾಂಗ್ರೆಸ್ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಹೇಳಿದ್ದಾರೆ. 

ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಮಾತನಾಡಿದ ಸಚಿವ ಪಿ.ಟಿ‌.ಪರಮೇಶ್ವರ ನಾಯ್ಕ, ನಮ್ಮ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ.  ಸರಕಾರ ಅಸ್ಥಿರಗೊಳಿಸಿ ತಾವು ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. 
ಈ ಬಗ್ಗೆ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ. ಅವರ ಕುತಂತ್ರ ನಿರಂತರವಾಗಿ ನಡೆಯುತ್ತಿದೆ ಎಂದರು. 

ಸಿದ್ಧರಾಮಯ್ಯನವರು ಈಗಾಗಲೇ ಐದು ವರ್ಷ ಆಡಳಿತ ನಡೆಸಿದ್ದಾರೆ. ಅವರು ಎಲ್ಲ ವರ್ಗದವರಿಗೂ ಸಹ ಸಾವಿರಾರು ಕೋಟಿ ಅನುದಾನ ನೀಡಿ ಒಳ್ಳೆ ಆಡಳಿತ ನೀಡಿದ್ದಾರೆ. ಹಾಗಾಗಿ ಅವರು ಕುತಂತ್ರ ಮಾಡುವ ಪ್ರಶ್ನೆಯೇ ಇಲ್ಲ. ನಾವೂ ಸಹ ಅವರ ಆಪ್ತರೇ. ಎಂಭತ್ತು‌ ಜನ ಶಾಸಕರಿಗೆ ಸಿದ್ದರಾಮಯ್ಯ ಆಪ್ತರಾಗಿದ್ದಾರೆ ಎಂದು ಪರಮೇಶ್ವರ್ ನಾಯ್ಕ್ ಹೇಳಿದರು.

ಇನ್ನು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ದೋಸ್ತಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರ ಖಂಡಿತ ಉಳಿಯಲಿದೆ. ಯಾವ ಕಾರಣಕ್ಕೂ ಪತನ ಆಗುವುದಿಲ್ಲ ಎಂದು ಪರಮೇಶ್ವರ್ ನಾಯ್ಕ್ ಹೇಳಿದರು.