ಜಮ್ಮು(ಜೂ.23): ಬಿಜೆಪಿ ಹಾಗೂ ಪಿಡಿಪಿ ನಡುವಿನ ಮೈತ್ರಿ ಮುರಿದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಜಮ್ಮುವಿಗೆ ಭೇಟಿ ನೀಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ಒಂದು ದಿನದ ಭೇಟಿ ನೀಡಿರುವ ಅಮಿತ್ ಶಾ ಅವರನ್ನು ಪಕ್ಷದ ಯುವ ಘಟಕದಿಂದ ವಿಮಾನ ನಿಲ್ದಾಣದಿಂದ ರಾಜ್ಯದ ಅತಿಥಿ ಗೃಹದವರೆಗೂ ಅದ್ದೂರಿಯಾಗಿ ಬೈಕ್  ಮೆರವಣಿಗೆ ಮೂಲಕ ಕರೆತರಲಾಯಿತು.

ರಾಜ್ಯದಲ್ಲಿ ಈಗ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದು,  ಮುಂದಿನ ಚುನಾವಣೆ ಸಂಬಂಧ  ಪಕ್ಷದ ಚುನಾವಣಾ ಸಮಿತಿಯೊಂದಿಗೆ ಚರ್ಚೆ ನಡೆಸಿದರು. ಡಿಜಿಟಲ್ ಮಾಧ್ಯಮ ಮತ್ತಿತರ ಸಾಮಾಜಿಕ ಜಾಲತಾಣಗಳ ಸ್ವಯಂ ಸೇವಕರೊಂದಿಗೆ ಸಭೆ ನಡೆಸಲಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ  ಅಮಿತ್ ಶಾ ಭೇಟಿ ನೀಡಿದ್ದಾರೆ ಎಂದು  ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ಮಧ್ಯೆ ಶ್ರೀನಗರದಲ್ಲಿ  ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ನೆಟ್ ವರ್ಕಿಂಗ್ ಸೌಲಭ್ಯವನ್ನು  ಮತ್ತೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.