ನವದೆಹಲಿ[ಜೂ.14]: ಕೇಂದ್ರ ಗೃಹ ಸಚಿವರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಈ ವರ್ಷಾಂತ್ಯದವರೆಗೂ ಅಧ್ಯಕ್ಷೆ ಹುದ್ದೆಯಲ್ಲಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಗುರುವಾರ ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಬ್ಬರಿಗೆ ಒಂದು ಹುದ್ದೆ ಅನ್ವಯ, ಕೇಂದ್ರ ಗೃಹ ಸಚಿವರಾಗುತ್ತಲೇ ಅಮಿತ್‌ ಶಾ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬಹುದು ಎನ್ನಲಾಗಿತ್ತು. ಆದರೆ ಪಕ್ಷದ ಸಾಂಸ್ಥಿಕ ಚುನಾವಣೆಗಳು ಇನ್ನೂ ನಡೆದಿಲ್ಲ. ಅದಕ್ಕೂ ಮೊದಲು ಬಿಜೆಪಿ ದೇಶಾದ್ಯಂತ ಮತ್ತೊಂದು ಸುತ್ತಿನಲ್ಲಿ ಪಕ್ಷಕ್ಕೆ ಮತದಾರರ ನೋಂದಣಿ ಅಭಿಯಾನ ನಡೆಸಲು ನಿರ್ಧರಿಸಿದೆ. ಅದು ಪೂರ್ಣಗೊಂಡ ಬಳಿಕ, ದೇಶಾದ್ಯಂತ ಎಲ್ಲಾ ರಾಜ್ಯ ಘಟಕಗಳಲ್ಲಿ ಸಾಂಸ್ಥಿಕ ಚುನಾವಣೆ ನಡೆಸಲಾಗುವುದು. ಅದು ಮುಗಿದ ಬಳಿಕವೇ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ಹೀಗಾಗಿ ವರ್ಷಾಂತ್ಯದ ವೇಳೆಗೆ ನಡೆಯಬೇಕಿರುವ ಮಹಾರಾಷ್ಟ್ರ, ಜಾರ್ಖಂಡ್‌ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳು ಅಮಿತ್‌ ಶಾ ನೇತೃತ್ವದಲ್ಲೇ ನಡೆಯುವುದು ಖಚಿತವಾಗಿದೆ. ಬಿಜೆಪಿ ಅಧ್ಯಕ್ಷರಾಗಿ ಅಮಿತ್‌ ಶಾ ಅವರ ಅವಧಿ 2020ರ ಜನವರಿಗೆ ತಿಂಗಳವರೆಗೂ ಇದೆ.