ನವದೆಹಲಿ[ಜೂ.08]: ಅಘೋಷಿತ ಉಪಪ್ರಧಾನಿಯಂತಾಗಿರುವ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಲ್ಲಿ ಇನ್ನೂ ಕೆಲವು ತಿಂಗಳ ಕಾಲ ಮುಂದುವರಿಯುವುದು ಬಹುತೇಕ ಖಚಿತವಾಗಿದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ಮುಂದೂಡಿಕೆಯಾಗಿದ್ದ ಬಿಜೆಪಿಯ ಆಂತರಿಕ ಚುನಾವಣೆಯನ್ನು ಈಗ ನಡೆಸಲು ಆ ಪಕ್ಷ ಮುಂದಾಗಿದೆ. ಇದು ಶೇ.50ರಷ್ಟುಮುಗಿಯುವವರೆಗೂ ಬಿಜೆಪಿ ಅಧ್ಯಕ್ಷರ ಬದಲಾವಣೆಯಾಗುವ ಯಾವುದೇ ಸಾಧ್ಯತೆಯೂ ಇಲ್ಲ ಎಂದು ಹೇಳಲಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ದಾಖಲೆ ಹೊಂದಿರುವ ಬಿಜೆಪಿ ಮತ್ತೊಂದು ಸುತ್ತಿನ ಸದಸ್ಯತ್ವ ಅಭಿಯಾನ ನಡೆಸಲು ಹೊರಟಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕವಾಗಬೇಕಿದೆ. ಆನಂತರವಷ್ಟೇ ರಾಷ್ಟ್ರ ಬಿಜೆಪಿ ಅಧ್ಯಕ್ಷರ ಬದಲಾವಣೆ ನಡೆಯಬೇಕಾಗಿದೆ.

ಅಮಿತ್‌ ಶಾ ಅವರ ಮೂರು ವರ್ಷಗಳ ಬಿಜೆಪಿ ಅಧ್ಯಕ್ಷ ಅವಧಿ ಕಳೆದ ವರ್ಷವೇ ಪೂರ್ಣಗೊಂಡಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದುವರಿಯಲು ಅವರಿಗೆ ಸೂಚನೆ ನೀಡಲಾಗಿತ್ತು. ಈಗ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಚುನಾವಣೆಗಳು ನಡೆಯಬೇಕಾಗಿದೆ.

ಪ್ರಕ್ರಿಯೆ ಹೇಗೆ?:

ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳನ್ನು ಹೊರತುಪಡಿಸಿ ಮಿಕ್ಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲು ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಬೇಕಾಗಿದೆ. ಇದು ಮುಗಿಯುತ್ತಿದ್ದಂತೆ ಬೂತ್‌ ಮಟ್ಟದಿಂದ ಸಂಘಟನೆ ಪುನಾರಚನೆ ಮಾಡಬೇಕು. ನಂತರ ರಾಜ್ಯ ಮಂಡಳಿಗಳ ನೂತನ ಸದಸ್ಯರು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಆ ಬಳಿಕ ರಾಷ್ಟ್ರೀಯ ಮಂಡಳಿ ಸದಸ್ಯರು ಬಿಜೆಪಿ ರಾಷ್ಟಾ್ರಧ್ಯಕ್ಷರನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಾಧ್ಯಕ್ಷರು ಹಾಗೂ ರಾಷ್ಟಾ್ರಧ್ಯಕ್ಷರು ಸೇರಿದಂತೆ ಹಿರಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ ಶೇ.50 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಂತರಿಕ ಚುನಾವಣೆ ಪೂರ್ಣಗೊಂಡಿರಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಯಾವಾಗ ಮುಗಿಯುತ್ತದೆ ಎಂಬುದು ತಿಳಿದುಬಂದಿಲ್ಲ. ಸದ್ಯದಲ್ಲೇ ವೇಳಾಪಟ್ಟಿಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳಿವೆ.