ಹೆಚ್ಚೂ ಕಡಿಮೆ ಜುಲೈವರೆಗೆ ಕರ್ನಾಟಕ ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ಬೇಡ ಎಂದು ಅಮಿತ್‌ ಶಾ ರಾಜ್ಯ ನಾಯಕರಿಗೆ ಹೇಳಿ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನ ಮುಗಿಯಲಿ. ಆಮೇಲೆ ಸಾಧಕ-ಬಾಧಕ ಯೋಚನೆ. ಅಲ್ಲಿಯವರೆಗೆ ಏನೇ ಮಾಡಲು ಹೋದರೂ ಕಾಂಗ್ರೆಸ್‌ ವಿವಾದ ಮಾಡುತ್ತದೆ.

ಹೊಸ ಸರ್ಕಾರದ ಫೀಲ್ ಗುಡ್‌ ಫ್ಯಾಕ್ಟರ್‌ಗೆ ಧಕ್ಕೆ ಆಗುತ್ತದೆ ಎಂದು ಹೇಳಿಬಿಟ್ಟಿದ್ದಾರೆ. ಕರ್ನಾಟಕದ ಬಿಜೆಪಿಯಲ್ಲಿ ಯಡಿಯೂರಪ್ಪ ಏನಕೇನ ತಮ್ಮ ಸರ್ಕಾರ ರಚಿಸಲೇಬೇಕು ಎಂದು ದಿಲ್ಲಿ ನಾಯಕರ ಬಳಿ ಹೇಳುತ್ತಿದ್ದರೆ, ಸಂಘದ ಬೆಂಬಲ ಇರುವ ಸಂತೋಷ್‌, ‘ಇದರಿಂದ ಮತ್ತೊಮ್ಮೆ ಕರ್ನಾಟಕದ ಬಿಜೆಪಿಯಲ್ಲಿ ಗಲಾಟೆಗೆ ಅವಕಾಶ ದೊರೆಯುತ್ತದೆ. ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗೋಣ. ಬಹುಮತ ಸಿಕ್ಕರೆ ಒಳ್ಳೆಯ ಆಡಳಿತ ಕೊಡಬಹುದು’ ಎಂದು ಹೇಳಿದ್ದಾರೆ.

ಆದರೆ ಇನ್ನೂ ಯಾವುದೇ ನಿರ್ಣಯಕ್ಕೆ ಹೋಗದೆ, ಗೃಹ ಇಲಾಖೆಯಲ್ಲಿ ಬ್ಯುಸಿ ಇರುವ ಶಾ, ‘ಬೆಂಗಳೂರು ಮತ್ತು ಮಧ್ಯಪ್ರದೇಶದ ಭೋಪಾಲ್ ಎರಡೂ ಕಡೆ ಕಾಂಗ್ರೆಸಿಗರನ್ನು ಸೆಳೆಯುವ ಕೆಲಸ ಈಗ ಬೇಡ, ಅಧಿವೇಶನ ಮುಗಿದುಹೋಗಲಿ. ಅಲ್ಲಿಯವರೆಗೆ ಕಾಯಿರಿ’ ಎಂದಿದ್ದಾರೆ.

ಇನ್ನೊಂದು ಮಹತ್ವದ ವಿಷಯ ಎಂದರೆ, ಶಾ ಅಕ್ಕಪಕ್ಕ ಸದಾ ಇರುವ ಪಿಯೂಷ್‌ ಗೋಯಲ್ ಧರ್ಮೇಂದ್ರ ಪ್ರಧಾನ್‌ ಅವರಿಗೆ ರಮೇಶ್‌ ಜಾರಕಿಹೊಳಿ ಸಾಮರ್ಥ್ಯದ ಬಗ್ಗೆ ನಂಬಿಕೆ ಇದ್ದಂತಿಲ್ಲ. ಇನ್ನು, ಎರಡು ರಾಷ್ಟ್ರೀಯ ಪಕ್ಷಗಳ ಕ್ಯಾಂಪ್‌ ನೋಡಿದರೆ, ದಿಲ್ಲಿ ಕಾಂಗ್ರೆಸ್‌ ನಾಯಕರಿಗೂ ಕುಮಾರಸ್ವಾಮಿ ಸರ್ಕಾರ ಉಳಿಯಲೇಬೇಕು ಎಂಬ ಭಾವನೆ ಇಲ್ಲ. ಬೀಳುವುದಾದರೆ ಬಿಜೆಪಿ ಬೀಳಿಸಲಿ ಎಂಬ ಯೋಚನೆ ಇದೆ. ಆ ಕಡೆ ಬಿಜೆಪಿ ಕ್ಯಾಂಪ್‌ನಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವ ಯೋಚನೆ ಇದೆ. ಆದರೆ ಹೆಸರು ಕೆಡಬಾರದು, ಇಮೇಜ್‌ಗೆ ಧಕ್ಕೆ ಬರಬಾರದು ಎಂಬ ದುಗುಡ. ಪಾಲಿಟಿಕ್ಸ್‌ನಲ್ಲಿ ಆಸೆಗಳು ನೂರಾರು, ಆತಂಕಗಳು ಸಾವಿರಾರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ