ನವದೆಹಲಿ[ಜೂ.07]: ಗೃಹ ಸಚಿವ ಅಮಿತ್‌ ಶಾಗೆ ಕೇಂದ್ರ ದೆಹಲಿಯ ಕೃಷ್ಣ ಮೆನನ್‌ ಮಾರ್ಗದ ಮಾಜಿ ಪ್ರಧಾನಿ ದಿ. ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನೇ ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

2004ರಲ್ಲಿ ಈ ಮನೆಗೆ ತೆರಳಿದ್ದ ಅಟಲ್‌ಜಿ ತಮ್ಮ ಕುಟುಂಬ ಸಮೇತ ಸುಮಾರು 14 ವರ್ಷಗಳ ಕಾಲ ಅಲ್ಲಿ ವಾಸವಾಗಿದ್ದರು. ಆಗಸ್ಟ್‌ನಲ್ಲಿ ವಾಜಪೇಯಿ ನಿಧನದ ನಂತರ ಅವರ ಕುಟುಂಬ ನವೆಂಬರ್‌ನಲ್ಲಿ ಈ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿತ್ತು.

ಗೃಹ ಸಚಿವರಾದ ಮೇಲೆ ಶಾ ಈ ಸರ್ಕಾರಿ ಬಂಗಲೆಗೆ ಭೇಟಿ ನೀಡಿ ಅಗತ್ಯ ಬದಲಾವಣೆಗೆ ಸೂಚಿಸಿದ್ದು, ನವೀಕರಣ ಕಾರ್ಯ ಆಗಲೇ ಆರಂಭಗೊಂಡಿದೆ. 1-2 ತಿಂಗಳಲ್ಲಿ ನವೀಕರಣ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.