Asianet Suvarna News Asianet Suvarna News

ರಾಜ್ಯದ ನಾಯಕರಿಗೇ ಶಾಕ್ ಕೊಟ್ಟಿದೆ ಅಮಿತ್ ಶಾ ಸೀಕ್ರೆಟ್ ಸಮೀಕ್ಷೆ; Exclusive ಮಾಹಿತಿ ಸುವರ್ಣನ್ಯೂಸ್ ಬಳಿ

ಡಿಸೆಂಬರ್ ತಿಂಗಳಲ್ಲಿ ಈ ಮೂರೂ ಸಮೀಕ್ಷೆಗಳ ಸಂಪೂರ್ಣ ವಿವರಗಳು ಅಮಿತ್ ಶಾ ಕೈ ಸೇರುತ್ತದೆ. ಅದೇ ತಿಂಗಳಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ರಹಸ್ಯ ವರದಿಯ ಮಂಡನೆಯಾಗಲಿದೆ. ಈ ಸಮೀಕ್ಷೆಗಳ ಆಧಾರದ ಮೇಲೆ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕೆಂಬುದನ್ನೂ ಫೈನಲ್ ಮಾಡಲಿದ್ದಾರೆ.

amit shah conducting secret survey in karnataka before assembly polls

ಬೆಂಗಳೂರು(ಮೇ 20): ಉತ್ತರಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ರಣತಂತ್ರವನ್ನೇ ಕರ್ನಾಟಕದಲ್ಲೂ ಅಳವಡಿಸಲು ಅಮಿತ್ ಶಾ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಆ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕಾರ್ಯಪ್ರವೃತ್ತರಾಗಿದ್ದಾರೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಅಮಿತ್ ಶಾ ಸೀಕ್ರೆಟ್ ಸಮೀಕ್ಷೆ ಆರಂಭಿಸಿದ್ದಾರೆ. ರಾಜ್ಯದ ಬಿಜೆಪಿ ನಾಯಕರ ಅರಿವಿಗೇ ಬಾರದಂತೆ ಅಮಿತ್ ಶಾ ಕಳುಹಿಸಿದ ತಂಡವೊಂದು ಬಹಳ ಗುಪ್ತವಾಗಿ ಸರ್ವೆ ನಡೆಸಲು ರಾಜ್ಯಕ್ಕೆ ಕಾಲಿಟ್ಟಿದೆ. ಇದರ ಎಕ್ಸ್'ಕ್ಲೂಸಿವ್ ಮಾಹಿತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಅಂದಹಾಗೆ, ರಾಜ್ಯದ ನಾಯಕರಿಗೇ ಗೊತ್ತಿಲ್ಲದ ಈ ಸಮೀಕ್ಷೆ ವಿಚಾರವು ಅಮಿತ್ ಶಾ, ಮೋದಿ ಸೇರಿದಂತೆ ಕೆಲವೇ ನಾಯಕರಿಗೆ ಮಾತ್ರ ತಿಳಿದಿದೆ.

ಯಾರು ಮಾಡುತ್ತಾರೆ ಸಮೀಕ್ಷೆ?
ಗುಡಗಾಂವ್ ಮೂಲದ ಬಿಲಿಯನ್ ಮೈಂಡ್ಸ್ ಎಂಬ ಸಂಸ್ಥೆಯನ್ನು ಅಮಿತ್ ಶಾ ನೆಚ್ಚಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಬಹಳ ನಿಖರವಾದ ಗ್ರೌಂಡ್ ರಿಪೋರ್ಟ್'ನ್ನು ಈ ಸಂಸ್ಥೆ ಕೊಟ್ಟಿತ್ತೆನ್ನಲಾಗಿದೆ. ಅಸ್ಸಾಂ ರಾಜ್ಯದಲ್ಲೂ ಈ ಸಂಸ್ಥೆ ನಿಖರ ಮಾಹಿತಿ ಕಲೆಹಾಕಿಕೊಟ್ಟಿತ್ತು.

ಯಾರು ಮಾಡ್ತಾರೆ ಸಮೀಕ್ಷೆ? Exclusive
ಬಿಲಿಯನ್ ಮೈಂಡ್ಸ್ ಸಂಸ್ಥೆಯು ಕರ್ನಾಟಕದ ಎಲ್ಲಾ 224 ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಲು 40-45 ಜನರ ಕಲೆಹಾಕಿದೆ. ಇವರನ್ನು ನಾಲ್ಕು ತಂಡಗಳಾಗಿ ವಿಭಜಿಸಿದೆ. ಒಂದೊಂದು ತಂಡದಲ್ಲಿ 10-11 ಮಂದಿ ಇರುತ್ತಾರೆ.

ಮೂರು ಹಂತದ ಸಮೀಕ್ಷೆ:
ಈ ವರ್ಷದಂತ್ಯದೊಳಗೆ ಮೂರು ಸಮೀಕ್ಷೆಗಳು ನಡೆಯಲಿವೆ. ಸೆಪ್ಟೆಂಬರ್ ತಿಂಗಳಷ್ಟರಲ್ಲಿ ಈ 3 ಸರ್ವೆಗಳು ರಾಜ್ಯದ ಸ್ಥಿತಿಯ ವಾಸ್ತವವನ್ನು ಬಿಚ್ಚಿಡಲಿಡಲಿವೆ. ಇದಕ್ಕಾಗಿ ಸಮೀಕ್ಷೆ ನಡೆಸುವವರು ರಹಸ್ಯ ಕ್ಯಾಮೆರಾ ಇಟ್ಟುಕೊಂಡು ಸಜ್ಜಾಗಿದ್ದಾರೆ.

ಮೊದಲ ಹಂತದಲ್ಲಿ:
ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗುವ ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯ ಸರಕಾರದ ಬಗ್ಗೆ ಎಲ್ಲಾ ಕ್ಷೇತ್ರಗಳಲ್ಲೂ ಜನಾಭಿಪ್ರಾಯ ಹೇಗಿದೆ ಎಂಬ ಗ್ರೌಂಡ್ ರಿಪೋರ್ಟ್ ಸಿದ್ಧವಾಗಲಿದೆ. ಟೀ ಸ್ಟಾಲ್'ಗಳು, ಯುವಕರು ಗುಂಪು ಸೇರುವ ಅಡ್ಡಾ ಇತ್ಯಾದಿ ಸ್ಥಳಗಳು ಈ ಸಮೀಕ್ಷಾ ತಂಡದ ಟಾರ್ಗೆಟ್ ಆಗಲಿವೆ. ಸರಕಾರದ ಬಗ್ಗೆ ಜನಾಭಿಪ್ರಾಯವಷ್ಟೇ ಅಲ್ಲ, ಮತದಾರನ ಒಲವು ಯಾರತ್ತ ಇದೆ ಎಂಬುದರ ಚಿತ್ರಣವನ್ನೂ ಅವರು ಹೆಕ್ಕಲಿದ್ದಾರೆ. ಜೂನ್ ತಿಂಗಳಲ್ಲಿ ಈ ಸಮೀಕ್ಷೆ ಮುಕ್ತಾಯವಾಗಲಿದೆ.

ಎರಡನೇ ಹಂತದಲ್ಲಿ:
ಮೊದಲ ಹಂತದ ಸಮೀಕ್ಷೆಯ ರಹಸ್ಯ ವರದಿಯು ಜುಲೈ ತಿಂಗಳಲ್ಲಿ ಅಮಿತ್ ಶಾ ಕೈಸೇರಲಿದೆ. ಈ ವರದಿ ಇಟ್ಟುಕೊಂಡು ಆಗಸ್ಟ್'ನಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆಗಸ್ಟ್ ಎರಡನೇ ವಾರದಿಂದ ಎರಡನೇ ಹಂತದ ಸಮೀಕ್ಷೆ ನಡೆಯಲಿದೆ. ಸ್ಥಳೀಯ ಸಮಸ್ಯೆಗಳು ಮತ್ತು ಬಿಜೆಪಿ ಅಭ್ಯರ್ಥಿಗಳ ಸಂಭವನೀಯರ ಪಟ್ಟಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಾವ್ಯಾವ ಬಿಜೆಪಿ ಮುಖಂಡರು ಎಷ್ಟೆಷ್ಟು ಸಕ್ರಿಯರಾಗಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಲಾಗುತ್ತದೆ. ಈ ಎರಡನೇ ಹಂತದ ಸಮೀಕ್ಷೆಯ ವರದಿಯನ್ನು ಬಹಳ ರಹಸ್ಯವಾಗಿ ಇಟ್ಟುಕೊಂಡಿರಲಾಗುತ್ತದೆ.

ಮೂರನೇ ಹಂತದಲ್ಲಿ:
ಸೆಪ್ಟೆಂಬರ್ 15ರ ನಂತರ ಮೂರನೇ ಹಾಗೂ ಕೊನೆಯ ಹಂತದ ಸಮೀಕ್ಷೆ ನಡೆಯಲಿದೆ. ಈ ಕೊನೆಯ ಸಮೀಕ್ಷೆಯಲ್ಲಿ ಬಿಜೆಪಿ ಸಂಭವನೀಯರ ಪಟ್ಟಿ ಸಿದ್ಧವಾಗುತ್ತದೆ. ಲಾಬಿ ಮಾಡಿ ಟಿಕೆಟ್ ಪಡೆದುಕೊಳ್ಳಲು ಯತ್ನಿಸುತ್ತಿರುವವರು, ಜನಬೆಂಬಲ ಹೊಂದಿರುವ ಲೋಕಲ್ ನಾಯಕರು ಇತ್ಯಾದಿ ಬಹಳ ಆಳವಾಗಿ ಮಾಹಿತಿ ಕಲೆಹಾಕಲಾಗುತ್ತದೆ.

ಡಿಸೆಂಬರ್ ತಿಂಗಳಲ್ಲಿ ಈ ಮೂರೂ ಸಮೀಕ್ಷೆಗಳ ಸಂಪೂರ್ಣ ವಿವರಗಳು ಅಮಿತ್ ಶಾ ಕೈ ಸೇರುತ್ತದೆ. ಅದೇ ತಿಂಗಳಲ್ಲಿ ನಡೆಯಲಿರುವ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ರಹಸ್ಯ ವರದಿಯ ಮಂಡನೆಯಾಗಲಿದೆ. ಈ ಸಮೀಕ್ಷೆಗಳ ಆಧಾರದ ಮೇಲೆ ಅಮಿತ್ ಶಾ ಅವರು ರಾಜ್ಯದಲ್ಲಿ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕೆಂಬುದನ್ನೂ ಫೈನಲ್ ಮಾಡಲಿದ್ದಾರೆ. ಈ ಮೂಲಕ ಬಿಜೆಪಿಯ ಮಿಷನ್-150 ಗುರಿ ನೆರವೇರುತ್ತಾ ಎಂಬುದನ್ನು ಕಾದುನೋಡಬೇಕು.

Follow Us:
Download App:
  • android
  • ios