Asianet Suvarna News Asianet Suvarna News

ಹಿಟ್ಲರ್‌ನಂತೆ ಮೋದಿ, ಅಮಿತ್ ಶಾ ವರ್ತನೆ: ಸಿದ್ದರಾಮಯ್ಯ ಕಿಡಿ

ಹಿಟ್ಲರ್‌ ರೀತಿ ಮೋದಿ, ಶಾ ವರ್ತನೆ: ಸಿದ್ದರಾಮಯ್ಯ| ಭಾರತವನ್ನು ಕೇಸರೀಕರಣಗೊಳಿಸಲು ಹೊರಟಿದ್ದಾರೆ| ದೇಶದಲ್ಲಿ ಅಘೋಷಿತ ತುರ್ತು ಸ್ಥಿತಿ: ಮಾಜಿ ಸಿಎಂ

Amit Shah And Narendra Modi Behaves Like Hitler Says Siddaramaiah
Author
Bangalore, First Published Aug 1, 2019, 8:21 AM IST
  • Facebook
  • Twitter
  • Whatsapp

ಬೆಂಗಳೂರು[ಆ.01]: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಇಡೀ ದೇಶವನ್ನು ಕೇಸರೀಕರಣಗೊಳಿಸಲು ಹೊರಟಿದ್ದಾರೆ. ಹಾಗೇನಾದರೂ ಆದರೆ ಮತ್ತಷ್ಟುಕಷ್ಟಎದುರಾಗಲಿದೆ. ಅವರು ಹಿಟ್ಲರ್‌ ರೀತಿ ನಡೆದುಕೊಳ್ಳುತ್ತಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಕಾಂಗ್ರೆಸ್‌ ಸದಸ್ಯತ್ವ ಮರು ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಕೋಮುವಾದಿ ಪಕ್ಷ ಎದುರಿಸಲು ಮಾನಸಿಕವಾಗಿ ಸಿದ್ಧರಾಗುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಮೋದಿ ಮತ್ತು ಅಮಿತ್‌ ಶಾ ಇಡೀ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಲ್ಲಿ ಅನ್ಯಪಕ್ಷಗಳ ಶಾಸಕರನ್ನು ಹಣ, ಅಧಿಕಾರದ ಆಸೆ ತೋರಿಸಿ ಸೆಳೆಯುತ್ತಿದ್ದಾರೆ. ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲೂ ನಾಲ್ವರು ಕಾಂಗ್ರೆಸ್‌ ಶಾಸಕರನ್ನು ಸೆಳೆದಿದ್ದಾರೆ. ಗುಜರಾತ್‌, ಗೋವಾ, ಉತ್ತರ ಪ್ರದೇಶದಲ್ಲೂ ಕೆಲ ಶಾಸಕರು ಬಿಜೆಪಿ ಸೇರಿದ್ದಾರೆ.

ಅವರ ಆಮಿಷಗಳಿಗೆ ಬಗ್ಗದಿದ್ದರೆ ಐಟಿ, ಇಡಿ ದಾಳಿಯ ಬೆದರಿಕೆ ಹಾಕುತ್ತಿದ್ದಾರೆ. ಹಿಟ್ಲರ್‌ ಕೂಡ ಇದೇ ರೀತಿ ಮಾಡುತ್ತಿದ್ದ. ಈಗ ಇವರೂ ಹಿಟ್ಲರ್‌ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಮತ್ತು ಅಮಿತ್‌ ಶಾ ಐಟಿ, ಇಡಿ, ಚುನಾವಣಾ ಆಯೋಗ, ಸುಪ್ರೀಂಕೋರ್ಟ್‌ ಎಲ್ಲೆಡೆ ಅಧಿಕಾರ ದುರುಪಯೋಗದ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನಾಶಮಾಡ್ತಿದ್ದಾರೆ. ಕೋಮುವಾದಿ ಪಕ್ಷ ಎದುರಿಸಲು ಮಾನಸಿಕವಾಗಿ ಎಲ್ಲರೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಸ್ವಾರ್ಥ ರಾಜಕಾರಣ ಮಾಡಿದವರಿಗೆ ತಕ್ಕ ಪಾಠ:

ಕಾಂಗ್ರೆಸ್‌ನಿಂದ ಗೆದ್ದು ಸ್ವಾರ್ಥಕ್ಕಾಗಿ ರಾಜಕಾರಣಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದು, ಸ್ವಾರ್ಥ ರಾಜಕಾರಣ ಮಾಡಿದವರಿಗೆ ತಕ್ಕ ಪಾಠ. ಜತೆಗೆ ಬಿಜೆಪಿಯವರು ನಡೆಸುತ್ತಿರುವ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗೂ ಪಾಠವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ರಮೇಶ್‌ ಕುಮಾರ್‌ ಹೊಸದಾಗಿ ಪಕ್ಷ ಸೇರುತ್ತಿಲ್ಲ. ಪಕ್ಷದಲ್ಲಿಯೇ ಹಲವು ವರ್ಷದಿಂದ ಇದ್ದಾರೆ. ಹೈಕಮಾಂಡ್‌ ಸೂಚನೆಯಂತೆ ಸ್ಪೀಕರ್‌ ಆಗಿದ್ದರು. ಆ ಸಾಂವಿಧಾನಿಕ ಹುದ್ದೆ ಅಲಂಕರಿಸಿದಾಗ ಪಕ್ಷದ ಸದಸ್ಯತ್ವ ತೊರೆದಿದ್ದರು. ಈಗ ಮತ್ತೆ ಸದಸ್ಯತ್ವ ಪಡೆದಿದ್ದಾರೆ. ಅವರು ಸ್ಪೀಕರ್‌, ಸಚಿವ ಸ್ಥಾನದ ಮೇಲೆ ಆಸೆ ಪಟ್ಟವರಲ್ಲ. ನನ್ನ ಬಲವಂತದಿಂದ ಸಚಿವ ಸ್ಥಾನ ಪಡೆದಿದ್ದರು. ಅವರ ಮಾರ್ಗದರ್ಶನ ಪಕ್ಷಕ್ಕೆ ಅಗತ್ಯವಿದೆ ಎಂದು ಹೇಳಿದರು.

ರಮೇಶ್‌ ಕುಮಾರ್‌ ಅವರು ಸ್ಪೀಕರ್‌ ಆದ ನಂತರ ಪಕ್ಷದ ಜೊತೆ ಗುರುತಿಸಿಕೊಳ್ಳುವಂತಿಲ್ಲ. ಹಾಗಾಗಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಈಗ ಸ್ಪೀಕರ್‌ ಸ್ಥಾನದಿಂದ ಕೆಳಗಿಳಿದ ಬಳಿಕ ಮತ್ತೆ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ಪಕ್ಷಕ್ಕೆ ಅವರ ಮಾರ್ಗದರ್ಶನ ಅವಶ್ಯಕವಿದೆ. ಅವರು ಮತ್ತೆ ಸದಸ್ಯತ್ವ ಪಡೆದಿದ್ದರಿಂದ ಪಕ್ಷಕ್ಕೆ ಮತ್ತಷ್ಟುಬಲಬಂದಾಗಿದೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

Follow Us:
Download App:
  • android
  • ios