ಇಂದಿನಿಂದ 3 ದಿನಗಳ ಕಾಲ ಅಮಿತ್ ಶಾ ಮುಂಬೈ ಕರ್ನಾಟಕ ಪ್ರವಾಸ

news | Monday, April 2nd, 2018
Suvarna Web Desk
Highlights

ಶನಿವಾರ ಮೈಸೂರು ಭಾಗದಲ್ಲಿ ಪ್ರವಾಸ ಮುಗಿಸಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಮುಂಬೈ ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಬಲಪಡಿಸಲಿದ್ದಾರೆ.

ಬೆಂಗಳೂರು (ಏ. 02): ಶನಿವಾರ ಮೈಸೂರು ಭಾಗದಲ್ಲಿ ಪ್ರವಾಸ ಮುಗಿಸಿದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಇಂದು ಮುಂಬೈ ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಬಲಪಡಿಸಲಿದ್ದಾರೆ.

ಕಳೆದ ವಾರ ನಡೆಸಿದ್ದ ಮಧ್ಯ ಕರ್ನಾಟಕ ಪ್ರವಾಸದ ವೇಳೆ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮನೆಯಲ್ಲಿ ಭೋಜನ ಸ್ವೀಕರಿಸುವ ಅಮಿತ್‌ ಶಾ ಅವರು ಇತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಂದೇಶ ರವಾನಿಸಿದ್ದರು. ಇದೀಗ ಮುಂಬೈ ಕರ್ನಾಟಕ ಪ್ರದೇಶದ ಪ್ರವಾಸ ವೇಳೆ ಪಕ್ಷದ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ನಿವಾಸದಲ್ಲಿ ಭೋಜನ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿದ್ದು, ಈ ಮೂಲಕ ದಲಿತ ಸಮುದಾಯಕ್ಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ.

ಇದಲ್ಲದೆ, ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಕೇಂದ್ರವಾಗಿರುವ ಬಾದಾಮಿಯ ಶಿವಯೋಗಿ ಮಂದಿರಕ್ಕೂ ಭೇಟಿ ನೀಡಲಿದ್ದಾರೆ. ಇದು ಕೂಡ ಮಹತ್ವ ಪಡೆದುಕೊಂಡಿದೆ. ನಂತರ ಕುರುಬ ಸಮುದಾಯದ ಶ್ರದ್ಧಾ ಕೇಂದ್ರವಾಗಿರುವ ಹಾವೇರಿ ಜಿಲ್ಲೆ ಕಾಗಿನೆಲೆಗೂ ತೆರಳಲಿದ್ದಾರೆ.

ಮುಂಬೈ ಕರ್ನಾಟಕ ಪ್ರದೇಶದ ಪ್ರವಾಸ ಎಂದರೂ ಅಮಿತ್‌ ಶಾ ಅವರು ಆ ಭಾಗದ ಬೆಳಗಾವಿ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ. ಮಹದಾಯಿ ಹೋರಾಟದ ಬಿಸಿ ಇರುವ ಧಾರವಾಡ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಅಮಿತ್‌ ಶಾ ಅವರ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ.

ಇಂದಿನ ಕಾರ‍್ಯಕ್ರಮ:

ಭಾನುವಾರ ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಲಿರುವ ಅಮಿತ್‌ ಶಾ ಅವರು ಸೋಮವಾರ ಬೆಳಗ್ಗೆಯಿಂದ ಪ್ರವಾಸ ಆರಂಭಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಭೇಟಿ ನೀಡಿ ರಾಣಿ ಚನ್ನಮ್ಮ ಸ್ಮಾರಕಕ್ಕೆ ಭೇಟಿ ಕೊಡಲಿದ್ದಾರೆ. ಆ ಬಳಿಕ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ತೆರಳಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ, ಸಮಾಜ ಚಿಂತನ ಸಭೆ, ಮಹಿಳಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ ಗೋಕಾಕ್‌ನಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ನಾಳೆಯ  ಕಾರ‍್ಯಕ್ರಮ:

ಎರಡನೆಯ ದಿನವಾದ ಮಂಗಳವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಂತರ ಬಾಗಲಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ವ್ಯಾಪಾರಿ ವರ್ಗದವರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಪಕ್ಷದ ಸಾಂಸ್ಥಿಕ ಜಿಲ್ಲೆಗಳಾದ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮುಧೋಳದಲ್ಲಿ ಗೋವಿಂದ ಕಾರಜೋಳ ಅವರ ಮನೆಯಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಲಿದ್ದಾರೆ. ಬಳಿಕ ಬಾದಾಮಿಯ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.

ಬಾದಾಮಿಯಿಂದ ಹೆಲಿಕಾಪ್ಟರ್‌ನಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿಯ ಕಾಗಿನೆಲೆಗೆ ತೆರಳಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk