ಕೋಲ್ಕತಾ[ಮೇ.26]: ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ 18 ಸೀಟುಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಬಿಜೆಪಿ, 130 ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಗಿಂತ ಹೆಚ್ಚು ಮತಗಳನ್ನು ಪಡೆದಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 148 ಸ್ಥಾನಗಳು ಬೇಕಾಗಿವೆ. ಲೋಕಸಭೆ ಚುನಾವಣೆಯಲ್ಲಿ 130 ಕ್ಷೇತ್ರಗಳಲ್ಲಿ ಲೀಡ್‌ ಪಡೆದಿರುವ ಬಿಜೆಪಿ, ಮುಂದಿನ 2 ವರ್ಷದಲ್ಲಿ ಬಹುಮತದ ಹೊಸ್ತಿಲಿಗೆ ಬರಬಹುದು ಎಂಬ ಆತಂಕ ತೃಣಮೂಲ ಕಾಂಗ್ರೆಸ್ಸನ್ನು ಬಹುವಾಗಿ ಕಾಡತೊಡಗಿದೆ.

ಈ ಹಿನ್ನೆಲೆಯಲ್ಲಿ ಟಿಎಂಸಿ ಮುಖ್ಯಸ್ಥೆ ಹಾಗೂ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಕ್ಷದ ನೂತನ ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಪ್ರಮುಖ ನಾಯಕರ ತುರ್ತು ಸಭೆಯನ್ನು ಶನಿವಾರ ನಡೆಸಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗಳಿಸಿ, ಶೇ.17ರಷ್ಟುಮತ ಗಳಿಕೆಯನ್ನು ಬಿಜೆಪಿ ಹೊಂದಿತ್ತು. ಆದರೆ ಈ ಬಾರಿ ಬಿಜೆಪಿಯ ಮತ ಗಳಿಕೆ ಶೇ.40.5ಕ್ಕೆ ಏರಿಕೆಯಾಗಿದೆ. ತೃಣಮೂಲ ಕಾಂಗ್ರೆಸ್‌ ಶೇ.43 ಮತ ಗಳಿಕೆಯೊಂದಿಗೆ 22 ಕ್ಷೇತ್ರ ಗೆದ್ದಿದ್ದು, ಅಲ್ಲೆಲ್ಲಾ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಎಡರಂಗ ಹಾಗೂ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಜಾರಿವೆ. ತೃಣಮೂಲ ಕಾಂಗ್ರೆಸ್‌ ವಿಜೇತವಾಗಿರುವ 16 ಕ್ಷೇತ್ರಗಳಲ್ಲಿ ಕಡೆಯ ಕ್ಷಣದವರೆಗೂ ತೀವ್ರ ಪೈಪೋಟಿ ಕಂಡುಬಂದಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ತೋರಿದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ಸಿನ ಮುಂದಿನ ಭವಿಷ್ಯದ ಬಗ್ಗೆ ನಾಯಕರು ಆತಂಕಗೊಂಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರದ ಅಸ್ಥಿರತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿಗೆ ಆಗಿರುವ ಲಾಭ ತಾತ್ಕಾಲಿಕ ಎಂದು ಪಕ್ಷದ ಉನ್ನತ ಮುಖಂಡರು ಸಮಾಧಾನಪಡಿಸುತ್ತಿದ್ದಾರೆ.