ಶಬರಿಮಲೆ ಹಾಗೂ ನ್ಯಾಪ್ಕಿನ್ ಬಗ್ಗೆ ಸ್ಮೃತಿ ಇರಾನಿ ಹೇಳಿಕೆ
ರಕ್ತದ ಕಲೆಗಳಿರುವ ನ್ಯಾಪ್ಕಿನ್ ನೊಂದಿಗೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಎಲ್ಲರಿಗೂ ಇರಬೇಕು. ನ್ಯಾಪ್ಕಿನ್ ಜತೆ ಗೆಳೆಯರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ?
ಮುಂಬೈ[ಅ.23]: ಸುಪ್ರೀಂ ಕೋರ್ಟ್ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಅವಕಾಶ ಕಲ್ಪಿಸಲು ಆದೇಶ ನೀಡಿದ ನಂತರ ದೇಗುಲದ ಆವರಣದಲ್ಲಿ ಮಹಿಳೆಯರ ಪ್ರವೇಶಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿಯೇ ದೇಗುಲ ಹಾಗೂ ನ್ಯಾಪ್ಕಿನ್ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ 'ಯಂಗ್ ಥಿಂಕರ್' ಸಮಾವೇಶದಲ್ಲಿ ಮಾತನಾಡಿದ ಅವರು ,ನಾನು ಒಬ್ಬ ಕೇಂದ್ರ ಸಚಿವೆಯಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಹೇಳಿಕೆ ನೀಡಲಾರೆ ತೀರ್ಪಿನ ಬಗ್ಗೆ ಟೀಕೆ ಮಾಡಲು ನಾನು ಯಾರು ಅಲ್ಲ. ನಮಗೆ ದೇಗುಲದಲ್ಲಿ ಪ್ರಾರ್ಥಿಸುವ ಹಕ್ಕು ಇದೆ ಎಂದು ಕೇಂದ್ರ ಸಚಿವೆ ತಿಳಿಸಿದರು.
ರಕ್ತದ ಕಲೆಗಳಿರುವ ನ್ಯಾಪ್ಕಿನ್ ನೊಂದಿಗೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಎಲ್ಲರಿಗೂ ಇರಬೇಕು. ನ್ಯಾಪ್ಕಿನ್ ಜತೆ ಗೆಳೆಯರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ? ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಅಲ್ಲದೆ ಪೂಜೆ ಹಾಗೂ ಅಪವಿತ್ರಗೊಳಿಸುವ ವಿಚಾರದ ನಡುವೆ ಬಹಳ ವ್ಯತ್ಯಾಸವಿದೆ, ನಾವು ಅದನ್ನು ಗುರುತಿಸಿ, ಗೌರವಿಸಬೇಕು ಎಂದರು.
ನಾನು ಪಾರ್ಸಿ ಧರ್ಮದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು ನಮ್ಮ ಇಬ್ಬರು ಮಕ್ಕಳು ಅದೇ ಧರ್ಮವನ್ನು ಪಾಲಿಸುತ್ತಾರೆ. ನಾನು ಹಿಂದೂ ಧರ್ಮದ ಆರಾಧಕಳಾಗಿದ್ದೇನೆ. ನನಗೆ ಮಗು ಜನಿಸಿದಾಗ ಪಾರ್ಸಿ ದೇಗುಲಕ್ಕೆ ಹೋಗುವ ಸಂದರ್ಭ ಒದಗಿತ್ತು. ನನ್ನ ಗಂಡನ ಕೈಗೆ ಮಗು ನೀಡಿ ನಾನು ಹೊರಗೆ ಉಳಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.