ಬೆಂಗಳೂರು [ಜು.12] :  ಅತೃಪ್ತ ಶಾಸಕರ ರಾಜೀನಾಮೆ ಕುರಿತ ನಿರ್ಧಾರ ಇತ್ಯರ್ಥಗೊಳ್ಳದಿರುವ ಮಧ್ಯೆಯೇ ಶುಕ್ರವಾರದಿಂದ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ವಿಪ್‌ ಜಾರಿಗೊಳಿಸಲಾಗಿದೆ.

ಶಾಸಕರು ಶುಕ್ರವಾರದಿಂದ ಈ ತಿಂಗಳ 26ರವರೆಗೆ ನಡೆಯುವ ಪ್ರತಿದಿನದ ಕಲಾಪದಲ್ಲಿ ಕಡ್ಡಾಯವಾಗಿ ಉಪಸ್ಥಿತರಿದ್ದು, ಅಲ್ಲಿ ಮಂಡನೆಯಾಗುವ ವಿತ್ತೀಯ ವಿಧೇಯಕಗಳು, ಶಾಸನಗಳು ಮತ್ತು ಇತರ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸುವಂತೆ ವಿಪ್‌ನಲ್ಲಿ ಸೂಚಿಸಲಾಗಿದೆ.

ಇದೀಗ ಆಡಳಿತಾರೂಢ ಪಕ್ಷಗಳ ಒಟ್ಟು 16 ಶಾಸಕರು ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆ ಅಂಗೀಕಾರಗೊಂಡಿಲ್ಲ. ಹೀಗಾಗಿ, ತಾವು ರಾಜೀನಾಮೆ ನೀಡಿರುವುದರಿಂದ ಅಧಿವೇಶನದ ಕಲಾಪದಿಂದ ದೂರ ಉಳಿಯಬೇಕೊ ಅಥವಾ ವಿಪ್‌ ಉಲ್ಲಂಘನೆಯ ಕ್ರಮಕ್ಕೆ ಹೆದರಿ ಸದನಕ್ಕೆ ಆಗಮಿಸಬೇಕೊ ಎಂಬ ಗೊಂದಲ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನದ ಮೊದಲ ದಿನವಾದ ಶುಕ್ರವಾರ ಸಂತಾಪ ಸೂಚನೆ ಹೊರತುಪಡಿಸಿ ಬೇರೆ ಯಾವುದೇ ಕಾರ್ಯಸೂಚಿ ಇಲ್ಲ. ಹೀಗಾಗಿ, ಸರ್ಕಾರಕ್ಕೆ ಪ್ರತಿಪಕ್ಷದಿಂದ ಹೆಚ್ಚು ಸಂಕಷ್ಟಎದುರಾಗುವ ಸಾಧ್ಯತೆ ಕಡಮೆ. ಆದರೆ, ಸೋಮವಾರದಿಂದ ಅಧಿವೇಶನದ ಕಲಾಪ ಸಕ್ರಿಯವಾಗಿ ನಡೆಯುವುದರಿಂದ ಆಗ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುವುದು ನಿಶ್ಚಿತವಾಗಿದೆ.

ಇದೆಲ್ಲದರ ನಡುವೆ ಶುಕ್ರವಾರ ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಕುರಿತ ಅರ್ಜಿಯ ವಿಚಾರಣೆ ಏನಾಗುತ್ತದೆ ಎಂಬುದು ಕುತೂಹಲಕರವಾಗಿದೆ. ಅದರ ಆಧಾರದ ಮೇಲೆಯೇ ಸೋಮವಾರದಿಂದ ಅಧಿವೇಶನದ ದಿಕ್ಕು ನಿರ್ಧಾರವಾಗುವ ಸಂಭವ ಹೆಚ್ಚಾಗಿದೆ.