ನವದೆಹಲಿ[ಫೆ.14]: ಎರಿಕ್ಸನ್‌ ಇಂಡಿಯಾ ಕಂಪನಿ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿ ಬುಧವಾರ ಸುಪ್ರೀಂಕೋರ್ಟ್‌ ಮುಂದೆ ವಿಚಾರಣೆಗೆ ಹಾಜರಾಗಿದ್ದರು. 2013ರಲ್ಲಿ 2ಜಿ ಪ್ರಕರಣದಲ್ಲಿ ಪಟಿಯಾಲಾ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಮೊದಲ ಬಾರಿಗೆ ಕೋರ್ಟ್‌ ರೂಮ್‌ಗೆ ಬಂದ ಅಂಬಾನಿ ಒತ್ತಡಕ್ಕೆ ಒಳಗಾದಂತೆ ಕಂಡು ಬಂದರು.

ಜನರಿಂದ ಕಿಕ್ಕಿರಿದಿದ್ದ ಕೋರ್ಟ್‌ನಲ್ಲಿ ಕುಳಿತು ಬೆವರುತ್ತಿದ್ದ ಅನಿಲ್‌ ಅಂಬಾನಿ, ತಮ್ಮ ವಕೀಲರಿಗೆ ಕೋರ್ಟ್‌ನಲ್ಲಿ ಏ.ಸಿ.ಯನ್ನು ಏಕೆ ಹಾಕಿಲ್ಲ ಎಂದು ಪ್ರಶ್ನಿಸಿದ ಪ್ರಸಂಗವೂ ನಡೆದಿದೆ. ಆದರೆ, ಇದಕ್ಕೆ ಕೋರ್ಟ್‌ ನಿಯಮಾವಳಿಯ ಪ್ರಕಾರ ಮಾಚ್‌ರ್‍ನಲ್ಲಿ ಮಾತ್ರ ಏ.ಸಿ. ಆನ್‌ ಮಾಡಲಾಗುತ್ತದೆ ಎಂಬ ಉತ್ತರ ಬಂತು. 10.30ಕ್ಕೆ ನ್ಯಾಯಾಧೀಶರು ಆಗಮಿಸಿದ ಬಳಿಕ ತಮ್ಮ ಕೇಸಿನ ವಿಚಾರಣೆ ಶುರುವಾಗಬಹುದು ಎಂದು ಅಂಬಾನಿ ಕಾಯುತ್ತಲೇ ಇದ್ದರು. ಆದರೆ, 12 ಗಂಟೆಯಾದರೂ ನ್ಯಾಯಾಧೀಶರು ಅಂಬಾನಿ ಅವರನ್ನು ವಿಚಾರಣೆಗೆ ಕರೆದಿರಲಿಲ್ಲ.

ಅಂತೂ ಎರಿಕ್ಸನ್‌ ಕೇಸ್‌ ಅನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಯಾಧೀಶರು, ಕೆಲವೇ ನಿಮಿಷಗಳ ವಿಚಾರಣೆ ನಡೆಸಿ ಪ್ರಕರಣವನ್ನು ಬುಧವಾರಕ್ಕೆ ಮುಂದೂಡಿದ್ದು, ವಿಚಾರಣೆಗೆ ಖುದ್ದು ಹಾಜರಾಗುವಂತೆ ಅನಿಲ್‌ ಅಂಬಾನಿಗೆ ಕೋರ್ಟ್‌ ಸೂಚಿಸಿದ್ದಾರೆ.